ಮಂಗಳೂರು,ಮಾ.07 (DaijiworldNews/HR): ನಿಶಾನ್ ವರುಣ್ ಮೂವೀಸ್ ಬ್ಯಾನರ್ನಡಿಯಲ್ಲಿ ತಯಾರಾಗಿರುವ ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ ಪೆಪ್ಪೆರೆರೆ ಪೆರೆರೆರೆ ತುಳು ಚಲನ ಚಿತ್ರ ಮಾರ್ಚ್ 7 ರಂದು ನಮ್ಮ ಕುಡ್ಲ ಟಾಕೀಸ್ನಲ್ಲಿ ಬಿಡುಗಡೆಗೊಂಡಿತು.
"ತುಳು ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ನೀಗಿಸುವ ಪ್ರಯತ್ನ ನಮ್ಮ ಕುಡ್ಲ ಟಾಕೀಸ್ ಮೂಲಕ ನೆರವೇರುತ್ತಿದೆ. ಇಂದಿನ ದಿನಗಳಲ್ಲಿ ಕುಟುಂಬದ ಅಂತರ ಜಾಸ್ತಿಯಾಗುತ್ತಾ ಇದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸುವ ಮೂಲಕ ಎಲ್ಲರೂ ಒಟ್ಟು ಸೇರುತ್ತಾರೆ. ಮನರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳಿಂದ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ" ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, "ಪ್ರಸಕ್ತ ತುಳು ಸಿನಿಮಾಗಳಿಗೆ ಥಿಯೇಟರ್ನ ಸಮಸ್ಯೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಕುಡ್ಲ ಟಾಕೀಸ್ ಮೂಲಕ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ನಿರ್ಮಾಪಕರಲ್ಲಿ ಹೊಸ ಆಶಾಭಾವನೆ ಮೂಡಿದೆ ಎಂದರು. ಕುಡ್ಲ ಟಾಕೀಸ್ನ ಪರಿಕಲ್ಪನೆಯಿಂದ ಸಿನಿಮಾವನ್ನು ಇದೀಗ ಮನೆ ಮನೆಯಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸಬಹುದು. ತುಳು ಭಾಷೆಯನ್ನು ಉಳಿಸುವ ಮತ್ತು ತುಳು ಸಿನಿಮಾವನ್ನು ಬೆಳೆಸುವ ನಿಟ್ಟಿನಲ್ಲಿ ಕೇಬಲ್ ಆಪರೇಟರ್ಗಳ ಸಹಕಾರ ಅತೀ ಅಗತ್ಯವಾಗಿದೆ. ನಮ್ಮ ಕುಡ್ಲ ಟಾಕೀಸ್ ಮೂಲಕ ಸಿನಿಮಾ ಬಿಡುಗಡೆಯಾಗುವುದರಿಂದ ಹೊಸ ಹೊಸ ನಿರ್ಮಾಪಕರು ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಕಲಾವಿದರಿಗೆ, ತಂತ್ರಜ್ಞರಿಗೆ ಯುವ ಬರಹಗಾರ ಸಾಹಿತಿಗಳಿಗೆ ಈ ಮೂಲಕ ಅವಕಾಶ ದೊರೆಯಲಿದೆ. ನಮ್ಮ ಕುಡ್ಲ ಟಾಕೀಸ್ ಪರಿಕಲ್ಪನೆಯಿಂದ ತುಳುಚಿತ್ರರಂಗಕ್ಕೆ ವ್ಯಾಕ್ಸಿನ್ ದೊರಕಿದಂತಾಗಿದೆ" ಹೇಳಿದ್ದಾರೆ.
"ನಾವು ಮಾಡಿದ ಕೆಲಸ ಎಲ್ಲರಿಗೂ ಮುಟ್ಟಬೇಕು, ತಲುಪಬೇಕು. ಕಷ್ಟಪಟ್ಟು ಮಾಡಿದ ಸಿನಿಮಾ ಪ್ರೇಕ್ಷಕರಿಗೆ ತಲುಪಿದಾಗ ಮಾಡಿದ ಕೆಲಸದಲ್ಲಿ ಸಾರ್ಥಕತೆ ಲಭಿಸುತ್ತದೆ" ಎಂದು ಎಎಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ನಿರ್ದೇಶಕ ನಟ ಅರ್ಜುನ್ ಕಾಪಿಕಾಡ್ ತಿಳಿಸಿದರು.
ಸಮಾರಂಭದಲ್ಲಿ ಮಾಲ್ನಾಡ್ ಇನ್ಫೋಟೆಕ್ನ ಸಿಇಓ ಹರೀಶ್ ಬಿ.ಕರ್ಕೇರ, ಸತ್ಯಜಿತ್ ಸುರತ್ಕಲ್, ವಿಶ್ವಾಸ್ದಾಸ್, ಪೆಪ್ಪೆರೆರೆ ಪೆರೆರೆರೆ ಸಿನಿಮಾದ ನಿರ್ಮಾಪಕರಾದ ನಿಶಾನ್ ಕೃಷ್ಣ ಭಂಡಾರಿ, ವರುಣ್ ಸಾಲ್ಯಾನ್, ಕುಸೇಲ್ದರಸೆ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಸುರೇಶ್ ಬಿ ಕರ್ಕೇರ, ಮೋಹನ್ ಬಿ ಕರ್ಕೇರ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.
ಪೆಪ್ಪೆರೆರೆ ಪೆರೆರೆರೆ ತುಳು ಚಲನ ಚಿತ್ರವು ಒಂದು ತಿಂಗಳ ಕಾಲ ಪ್ರತೀ ಭಾನುವಾರ ಮಧ್ಯಾಹ್ನ1:30 ಸಂಜೆ 6, ರಾತ್ರಿ 9 ಗಂಟೆಗೆ ನಮ್ಮ ಕುಡ್ಲ ಟಾಕೀಸ್ನಲ್ಲಿ ಪ್ರದರ್ಶನ ಕಾಣಲಿದೆ.