ಸ್ಯಾಕ್ರಮೆಂಟೊ, ಫೆ.27 (DaijiworldNews/HR): ಹಾಲಿವುಡ್ ಗಾಯಕಿ ಲೇಡಿ ಗಾಗಾರವರ ಎರಡು ನಾಯಿಗಳು ಕಳುವಾಗಿದ್ದು ಅವುಗಳನ್ನು ಹುಡುಕಿ ಸುರಕ್ಷಿತವಾಗಿ ಹಿಂದಿರುಗಿಸುವವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ ನೀಡಿವುದಾಗಿ ಘೋಷಿಸಿದ್ದ ಬೆನ್ನಲ್ಲೇ ಮಹಿಳೆಯೊಬ್ಬರು ನಾಯಿಗಳನ್ನು ಡೌನ್ ಟೌನ್ನ ವಾಯುವ್ಯ ದಿಕ್ಕಿನಲ್ಲಿರುವ ಎಲ್ಎಪಿಡಿಯ ಒಲಿಂಪಿಕ್ ಸಮುದಾಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಲೇಡಿ ಗಾಗಾರವರ ಉದ್ಯೋಗಿಯೊಬ್ಬರು, ಫ್ರೆಂಚ್ ಬುಲ್ಡಾಗ್ಸ್ ಕೊಜಿ ಮತ್ತು ಗುಸ್ತಾನ್ ಎಂಬ ಶ್ವಾನವನ್ನು ಲಾಸ್ ಏಂಜಲೀಸ್ ಬಳಿ ವಾಕಿಂಗ್ ಕರೆದುಕೊಂಡು ಹೋಗಿದ್ದ ವೇಳೆ ವ್ಯಕ್ತಿಯೋರ್ವ ಉದ್ಯೋಗಿ ಮೇಲೆ ಗುಂಡು ಹಾರಿಸಿ ಶ್ವಾನವನ್ನು ಕದ್ದು ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ಗಾಗಾ ತಿಳಿಸಿದ್ದಾರೆ.
ಈ ಘಟನೆ ಕುರಿತು ವಿವರಿಸಿರುವ ಲೇಡಿ ಗಾಗಾ, "ನನ್ನ ಮನಸ್ಸಿಗೆ ಆಘಾತವಾಗಿದ್ದು, ದೇವರ ದಯೆಯಿಂದ ನನ್ನ ಕುಟುಂಬವು ಮೊದಲಿನಂತೆ ಪೂರ್ಣವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಶ್ವಾನಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ. ಗಳನ್ನು ನೀಡುತ್ತೇನೆ" ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ಇನ್ನು ನಾಯಿಗಳನ್ನು ತಂದು ಕೊಟ್ಟಿರುವ ಮಹಿಳೆಗೂ ಅಪಹರಣದ ದಿನ ನಡೆದ ಶೂಟೌಟ್ ಗೂ ಯಾವುದೇ ಸಂಬಂಧ ಇಲ್ಲ ಎಂದು ವಿಚಾರಣೆಯ ನಂತರ ಪೋಲಿಸರು ತಿಳಿಸಿದ್ದಾರೆ.
ಫ್ರೆಂಚ್ ಬುಲ್ಡಾಗ್ಸ್ ಶ್ವಾನ ಬಹಳ ದುಬಾರಿ ಹಾಗೂ ಅಪರೂಪದ ತಳಿ ಶ್ವಾನವಾದರಿದ್ದ ಸಾವಿರಾರು ಡಾಲರ್ಗೆ ಮಾರಾಟವಾಗುತ್ತದೆ. ಈ ಉದ್ದೇಶದಿಂದ ದುಷ್ಕರ್ಮಿಗಳು ಶ್ವಾನವನ್ನು ಕದ್ದಿದ್ದರು ಎಂದು ಶಂಕಿಸಲಾಗುತ್ತಿದೆ.