ಮಂಗಳೂರು, ಫೆ.24 (DaijiworldNews/MB) : ಬಹುನಿರೀಕ್ಷಿತ ಕೊಂಕಣಿ ಧಾರಾವಾಹಿ ''ಗಾಡ್ಫಾದರ್'' ಫೆಬ್ರವರಿ 26 ರಿಂದ ದೈಜಿವರ್ಲ್ಡ್ ಟಿವಿ 24*7 ನಲ್ಲಿ ಪ್ರಸಾರವಾಗಲಿದೆ.
ಶುಕ್ರವಾರ ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೆ ಮತ್ತು ಭಾನುವಾರ ಸಂಜೆ 4 ಗಂಟೆಗೆ ಮರು ಪ್ರಸಾರವಾಗಲಿದೆ. ಈ ಧಾರಾವಾಹಿಯ ಸಂಚಿಕೆಗಳು ಆನ್ಲೈನ್ ವೀಕ್ಷಕರಿಗೆ, ಇತ್ತೀಚೆಗೆ ಆರಂಭವಾದ ದೈಜಿವರ್ಲ್ಡ್ನ ಒಟಿಟಿ ಪ್ಲಾಟ್ಫಾರ್ಮ್ ಲೋಕಲ್ವುಡ್ನಲ್ಲಿ ಲಭ್ಯವಿರಲಿದೆ.
25 ನಿಮಿಷಗಳ ಧಾರಾವಾಹಿ ಆಸ್ತಿಯ ವಿಷಯದಲ್ಲಿ ಎನ್ಆರ್ಐ ತಂದೆ ಮತ್ತು ಅವರ ಮಕ್ಕಳ ನಡುವಿನ ಜಗಳವನ್ನು ಪ್ರಸ್ತುತಪಡಿಸುತ್ತದೆ. ಭಾಗಶಃ, ಕಥಾವಸ್ತುವು ಪ್ರಸ್ತುತ ವಾಣಿಜ್ಯಿಕರಣ ಮನಸ್ಥಿತಿಯ ಸಮಾಜದಲ್ಲಿ ಕ್ಯಾಥೊಲಿಕ್ ಪ್ಯಾರಿಷ್ನ ಹಸ್ತಕ್ಷೇಪವನ್ನು ವಿವರಿಸುತ್ತದೆ.
'ಮಿಸ್ ಮೀನಾ ಆಂಡ್ ಫ್ಯಾಮಿಲಿ' ಯಶಸ್ಸಿನ ಬಳಿಕ ಗಾಡ್ಫಾದರ್ ಅತ್ಯಂತ ಸೃಜನಶೀಲ ಮತ್ತು ಪ್ರತಿಭಾವಂತ ಸ್ಟ್ಯಾನಿ ಬೆಲಾ ಅವರ ಎರಡನೇ ನಿರ್ದೇಶನವಾಗಿದೆ. ಈ ಧಾರಾವಾಹಿಯ ಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ.
''ಗಾಡ್ಫಾದರ್ ಪ್ರಸ್ತುತ ಸಮಾಜದ ನಡವಳಿಕೆಯನ್ನು ಮತ್ತು ಆಸ್ತಿ ಮತ್ತು ಸಂಪತ್ತಿನ ಮೇಲಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಈ ಧಾರಾವಾಹಿಯಲ್ಲಿ ನನ್ನ ಪ್ರೀತಿಪಾತ್ರರಾದ ಮಿಸ್ ಮೀನಾ ಆಂಡ್ ಫ್ಯಾಮಿಲಿಯ ಸಂಪೂರ್ಣ ತಂಡವನ್ನು ಉಳಿಸಿಕೊಂಡಿದ್ದೇನೆ. ಏತನ್ಮಧ್ಯೆ, ಈ ಧಾರಾವಾಹಿಯಲ್ಲಿ 15 ಕ್ಕೂ ಹೆಚ್ಚು ಹೊಸ ಕಲಾವಿದರು ನಟಿಸಿದ್ದಾರೆ. ನನ್ನ ತಂಡದ ಕೆಲಸ ಮತ್ತು ನಮ್ಮ ತಂಡದ ಸಾಧನೆ ಬಗ್ಗೆ ನನಗೆ ಅತೀವ ಸಂತೋಷವಾಗಿದೆ'' ಎಂದು ಹೇಳುತ್ತಾರೆ ನಿರ್ದೇಶಕ ಸ್ಟ್ಯಾನಿ ಅವರು.
ಆರ್ಆರ್ ಫೀಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಈ ಧಾರಾವಾಹಿಯನ್ನು ರೋನ್ಸ್ ಲಂಡನ್ ನಿರ್ಮಿಸಿದ್ದಾರೆ. ರೋನ್ಸ್ ಈ ಹಿಂದೆ ಕೊಂಕಣಿ ಚಲನಚಿತ್ರಗಳಾದ ಪ್ಲಾನಿಂಗ್ ದೇವಾಚೆಮ್, ಮಂಗಳೂರ್ ಟು ಗೋವಾ ಮತ್ತು ಕೆಲವು ತುಳು ಚಲನಚಿತ್ರಗಳನ್ನು ಸಹ-ನಿರ್ಮಾಪಕರಾಗಿದ್ದರು. ಅವರು ನಿರ್ಮಿಸುವ ಮೊದಲ ಟಿವಿ ಧಾರಾವಾಹಿ ಗಾಡ್ಫಾದರ್ ಆಗಿದ್ದು ಉತ್ತಮ ನಟನಾಗಿರುವ ಅವರು ಈ ಧಾರಾವಾಹಿಯಲ್ಲೂ ನಟಿಸಿದ್ದಾರೆ.
ಪ್ರಸಿದ್ಧ ಕಲಾವಿದರಾದ ಮೆಲ್ಲು ವೇಲೆನ್ಸಿಯಾ, ಜೀವನ್ ವಾಸ್ ಕುಲಶೇಖರ, ಸಪ್ನಾ ಸಲ್ಡಾನ್ಹಾ ವಾಮಂಜೂರು, ರೀಟಾ ಫರ್ನಾಂಡಿಸ್ ಬೆಂದೂರ್, ಶಾಂತಿ ಪ್ರಿಯಾ ಲಸ್ರಾಡೋ ಬೊಂದೇಲ್, ಜೋಷೆಲ್ ಡಿಸೋಜಾ ದೇರೆಬೈಲ್, ಶ್ವೇತಾ ವಾಸ್ ಕುಲಶೇಖರ, ಶೆಲ್ಡನ್ ತೌರೋ ಬೊಂದೇಲ್, ಜೆವೆಲ್ ಬಜ್ಜೋಡಿ, ಅಲ್ವಿನ್ ಈ ಧಾರಾವಾಹಿಯಲ್ಲು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಿರಣ್ ಕೋಟ್ಯಾನ್ ಕೇಪು, ದುರ್ಗಾ ಪ್ರಸಾದ್ ಕಕ್ಕೆಪದವು ಹಾಗೂ ದಯಾ ಕುಕ್ಕಾಜೆ ಅವರು ಈ ಧಾರಾವಾಹಿಯ ಚಿತ್ರೀಕರಣ ಮಾಡಿದ್ದಾರೆ.
ಆಶಿತ್ ಗ್ಲೆನ್ ಪಿಂಟೊ ಅವರು ಈ ಧಾರಾವಾಹಿಗೆ ಸಂಗೀತ ನೀಡಿದ್ದು ನೋಯಲ್ ಪುತ್ತೂರು ಈ ಧಾರಾವಾಹಿಯ ಸಂಕಲನ ಮಾಡಿದ್ದಾರೆ. ಶೀರ್ಷಿಕೆ ಗೀತೆಯನ್ನು ಗ್ಲಾನಿ ಫರ್ನಾಂಡಿಸ್ ಬರೆದಿದ್ದು ಮೊಹಮ್ಮದ್ ಇಕ್ಬಾಲ್ ಕಾಟಿಪಳ್ಳ ಧ್ವನಿ ನೀಡಿದ್ದಾರೆ.
ಧಾರಾವಾಹಿಯ ಡಬ್ಬಿಂಗ್ ಅನ್ನು ದೈಜಿವರ್ಲ್ಡ್ ಆಡಿಯೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ಮಾಡಲಾಗಿದ್ದು ಶ್ರೀನಿವಾಸ್ ಶ್ರೀಕಾಂತ್ ಅವರು ಡಬ್ಬಿಂಗ್ ಕಾರ್ಯ ನಿರ್ವಹಿಸಿದ್ದಾರೆ.