ಬೆಂಗಳೂರು, ಫೆ.23 (DaijiworldNews/PY): "ನಾನು ಅಪ್ಪನಿಗೆ ಹುಟ್ಟಿದ ಮಗ. ನನಗೆ ಅವಮಾನ ಮಾಡಲು ಬರಬೇಡಿ. ಈ ರೀತಿಯಾದ ಸ್ಥಿತಿಗತಿಗನ್ನು ಆರಂಭ ಮಾಡಿದರೆ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಶುರುವಾಗುತ್ತದೆ" ಎಂದು ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳು ಮಾತನಾಡಿರುವ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಸಮೀಪ ತಿ.ನರಸೀಪುರದ ಅತ್ತಹಳ್ಳಿಯಲ್ಲಿ ದರ್ಶನ್ ಅಭಿಮಾನಿಗಳಿಂದ ತರಾಟೆಗೆ ಒಳಗಾಗಿದ್ದ ಜಗ್ಗೇಶ್ ಅವರು, ಘಟನೆಯ ವೇಳೆ ಇದ್ದ ಯುವಕರಿಗೆ ಹಾಗೂ ಚಿತ್ರರಂಗದ ಪ್ರಮುಖರಿಗೆ ಮಾತುಗಳಲ್ಲೇ ಎಚ್ಚರಿಕೆ ನೀಡಿದ್ದಾರೆ.
"ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಅವಮಾನ ಮಾಡಲು ಬರಬೇಡಿ. ಈ ರೀತಿಯಾದ ಸ್ಥಿತಿಗತಿಗಳನ್ನು ಶುರು ಮಾಡಿದ್ದೇ ಆದಲ್ಲಿ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಆರಂಭವಾಗುತ್ತದೆ" ಎಂದಿದ್ದಾರೆ.
"ಇಂದು ಓರ್ವ ನಟನ ಸಿನಿಮಾ ಹಿಟ್ ಆಯಿತು ಎಂದರೆ ಇನ್ನೋರ್ವ ನಟ ಹುನ್ನಾರ ನಡೆಸುತ್ತಾನೆ. ಚಿತ್ರರಂಗದಲ್ಲಿ ನಾನೋಬ್ಬನೇ ಉಳಿಯಬೇಕು. ನನ್ನೊಬ್ಬನ ಚಿತ್ರವೇ ಓಡಬೇಕು ಎಂದಿದೆ. ಈ ರೀತಿ ಒಬ್ಬರನ್ನು ತುಳಿಯುವುದು ದರಿದ್ರ ರಾಜಕಾರಣದಲ್ಲಿ ಇದೆ. ಒಂದು ವಿಚಾರವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ನೋವು, ಅಪಮಾನ ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ ಮಾಡಿದ್ದೇನಾ? ಯಾರಿಗಾದರೂ ನೋವು ಕೊಡೋಣ ಎಂದು ಮಾತನಾಡಿದ್ದೇನಾ?. ನಿನ್ನೆ ಬಂದಿರುವವರ ಜೊತೆ ಅವರೊಂದಿಗೆ ಕೂತು ಮಾತನಾಡಿದ್ದೇನೆ" ಎಂದು ಹೇಳಿದ್ದಾರೆ.
"ಕೋಟ್ಯಾಂತರ ರೂಪಾಯಿ ವಂಚನೆ, ಕನ್ನಡ ನೆಲಕ್ಕೆ ಅವಮಾನ ಮಾಡಿದ್ದೇನಾ? ನಾನು ಅವಮಾನ ಮಾಡಿಲ್ಲ. ಆದರೆ, ಖಾಸಗಿ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವ ಹಾಗೆ ಆಗಿದೆ. ಹಾಗೆಂದು ನಾನು ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ" ಎಂದಿದ್ದಾರೆ.
"ನಾನು ಸಿನಿಮಾರಂಗಕ್ಕೆ ಬಂದು 40 ವರ್ಷಗಳಾಗಿವೆ. ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಯಾರು ಹುಟ್ಟಿರಲಿಲ್ಲ. ನಾನು 80ರ ದಶಕದಲ್ಲಿ ಸಿನಿಮಾಕ್ಕೆ ಬಂದವನು. ಡಾ.ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಪ್ರಭಾಕರ್, ಶಂಕರ್ನಾಗ್, ಅನಂತ್ನಾಗ್ ಅವರ ಜೊತೆ ಹೆಜ್ಜೆ ಹಾಕಿದವನು, ನಕ್ಕವನು, ಅತ್ತವನು, ಬದುಕಿದವನು. ನಾನು ಬೇರೆ ಭಾಷೆಗೆ ಎಡಗಾಲನ್ನು ಇಟ್ಟಿಲ್ಲ. ನಾನು ಕನ್ನಡಕ್ಕಾಗಿಯೇ ಬದುಕುತ್ತಿದ್ದೇನೆ. ಮುಂದೆಯೂ ಬದುಕುತ್ತೇನೆ" ಎಂದು ತಿಳಿಸಿದ್ದಾರೆ.
"ನಾನು ನನ್ನ ಬದುಕಲ್ಲೇ ಯಾರ ಬೂಟು ನೆಕ್ಕಿಲ್ಲ. ಹಾಗೇ ಮಾಡಿದ್ದರೆ ಈಗ ನಾನು ಎಂಎಲ್ಎ, ಮಂತ್ರಿ ಆಗಿರುತ್ತಿದ್ದೆ. ನೂರಾರು ಹುದ್ದೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಇದೇನಾ ನೀವು ಹಿರಿಯ ನಟರಿಗೆ ನೀಡುವ ಗೌರವ? ಅನ್ಯಭಾಷೆಯವರು ಬಂದು ಕನ್ನಡವನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನ್ನಡ ಮಕ್ಕಳನ್ನು ಬೆಳೆಯದಂತೆ ತುಳಿಯುತ್ತಿದ್ದಾರೆ. ನಮ್ಮವರಿಗೆಲ್ಲಾ ಪರಭಾಷೆಯಲ್ಲಿ ಮಾತನಾಡುವಂತೆ ಪ್ರಚೋದಿಸುತ್ತಿದ್ದಾರೆ. ಅಲ್ಲಿಗೆ ಕನ್ನಡ ಚಿತ್ರರಂಗ ಹಾಳಾಗಿ ಹೋಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲ" ಎಂದಿದ್ದಾರೆ.
"ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಬಳಿಕ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ಉಳಿದವರು ನಾವೇ ಮೂರು ನಾಲ್ಕು ಮಂದಿ. ನಾನು, ಶಿವರಾಜ್ಕುಮಾರ್, ರವಿಚಂದ್ರನ್, ರಮೇಶ್. ನಾವೆಲ್ಲಾ ಸತ್ತ ಬಳಿಕ ತಿಥಿ ಮಾಡಿ ಸಂತೋಷ ಪಡಿ" ಎಂದು ಬೇಸರದಿಂದ ಹೇಳಿದ್ದಾರೆ.
"ನಾನು ಪೂಜೆ, ಸಿನಿಮಾ, ಸಂಸಾರ ಎಂದು ಇರುವವನು. ನೀನು ಒಕ್ಕಲಿಗನಾ ಎಂದು ಕೇಳಿದಾಗಲೂ ನಾನು ಸುಮ್ಮನಿದ್ದವನು. ನಿನ್ನೆ ನೂರಾರು ಮಂದಿ ಕಿರುಚಿದ್ದಾಗ ನಾನು ಒಬ್ಬ ಹೇಗೆ ಮಾತನಾಡಲಿ. ಯಾವಾಗ ನಾವು ತಪ್ಪು ಮಾಡುತ್ತೇವೋ ಆಗ ಮಾತ್ರ ನನ್ನ ಚಪ್ಪಲಿ ಬಿಚ್ಚಿ ತಲೆಬಾಗಿ ಕ್ಷಮೆ ಕೇಳುತ್ತೇನೆ. ನನ್ನ ಕನ್ನಡಿಗರು ಸತ್ತಿಲ್ಲ. ಇನ್ನೂ ಬದುಕಿದ್ದಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ನೀವು ನನ್ನ 40 ವರ್ಷದ ಶ್ರಮಕ್ಕೆ ಅವಮಾನ ಮಾಡಿದ್ದೀರಿ. ಈ ರೀತಿಯಾದ ರೌಡಿಸಂ ಮಾಡಲು ಬರಬೇಡಿ" ಎಂದಿದ್ದಾರೆ.
"ನನಗೂ ಕೂಡಾ ಅಭಿಮಾನಿಗಳ ಸಂಘ ಇದೆ. 162 ಸಂಘಗಳಿವೆ. ಅವರಿಗೆ ಪ್ರತಿಕ್ರಿಯೆ ನೀಡಬೇಡಿ ಎಂದಿದ್ದೇನೆ. ಒಕ್ಕಲಿಗ ಮನೆತನದಿಂದ ಬಂದವನು ನಾನು. ಕಷ್ಟಪಟ್ಟು ಬೆಳೆದಿದ್ದೇನೆ. 40 ವರ್ಷಗಳಲ್ಲಿ ನಾನು 150 ಸಿನಿಮಾ ಮಾಡಿದ್ದು, 29 ಚಿತ್ರಗಳನ್ನು ನಿರ್ಮಿಸಿದ್ದೇನೆ. ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಎಲ್ಲಿಯೂ ಕೂಡಾ ಲಂಚ ತೆಗೆದುಕೊಂಡಿಲ್ಲ. ಪ್ರಾಮಾಣಿಕವಾಗಿ ಬದುಕಿದ್ದೇನೆ. ಈ ವಿಚಾರ ಮಂತ್ರಾಲಯದ ರಾಯರಿಗೆ ತಿಳಿದಿದೆ" ಎಂದು ತಿಳಿಸಿದ್ದಾರೆ.
"ನಟರ ನಡುವೆ ತಂದಿಟ್ಟು ತಮಾಷೆ ನೋಡುವುದನ್ನು ಬಿಡಿ. ಒಂದಲ್ಲಾ ಒಂದು ದಿನ ಈ ವಿಚಾರ ಜನರುಗೆ ತಿಳಿಯುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಜಗ್ಗೇಶ್, "ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದೆ! ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ! ಮುಂದೆ ನನ್ನ ಸಿನಿಮ ನನ್ನ ಝೀ ಟಿವಿ ಶೋಗಳಿಗೆ ಮೀಸಲು ಬದುಕು! ಕಾರಣ ತುಂಬ ತಾಮಸವಾಗಿದೆ ನಮ್ಮ ರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ!" ಎಂದಿದ್ದರು.