ಬೆಂಗಳೂರು, ಫೆ. 08 (DaijiworldNews/HR): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ಹಾಗೂ ಕಟೌಟ್ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನಸೆಳೆದಿದ್ದು, "ಈ ಸಿನಿಮಾ ಹಲವು ಭಾಷೆಗಳಲ್ಲಿ ತೆರಲಿದ್ದು, ಇದು 3ಡಿ ರೂಪದಲ್ಲಿ ಇರಲಿದೆ" ಎಂದು ಸುದೀಪ್ ತಿಳಿಸಿದ್ದಾರೆ.
ಈ ಕುರಿತು ಸುದೀಪ್ 25 ವಸಂತಗಳನ್ನು ಪೂರೈಸಿದ ಅಂಗವಾಗಿ ವಿಕ್ರಾಂತ್ ರೋಣ ಚಿತ್ರತಂಡವು ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್ ಮಾಹಿತಿ ನೀಡಿದ್ದು, "ಈ ಚಿತ್ರದ ಕಥೆಯು ಅತ್ಯಂತ ಅದ್ಭುತವಾಗಿದ್ದು, ಇದನ್ನು ಪ್ಯಾನ್ ಇಂಡಿಯಾ ಮಾಡಬೇಕು ಎನ್ನುವ ಆಲೋಚನೆ ಮೊದಲಿನಿಂದಲೂ ಇತ್ತು. ನಿರ್ಮಾಪಕ ಮಂಜು ಅವರು ಈ ಚಿತ್ರವನ್ನು 3ಡಿಯಲ್ಲೂ ತರಲು ಸಿದ್ಧತೆ ನಡೆಸಿದ್ದಾರೆ" ಎಂದರು.
ಇನ್ನು "1996 ಜನವರಿ 31 ಕಂಠೀರವ ಸ್ಟುಡಿಯೋದಿಂದ ನನ್ನ ಸಿನಿಪಯಣ ಆರಂಭವಾಗಿದ್ದು, ಕೆಲವೊಮ್ಮೆ 25 ವರ್ಷ ಆಯಿತು ಎಂದು ಹೇಳುವಾಗ ನಿವೃತ್ತಿಯ ಅನುಭವ ಕೊಡುತ್ತಾರೆ. ನನ್ನ ಸಿನಿಮಾ ಪಯಣವನ್ನು ನಾನು ಇನ್ನೂ ಅಧ್ಯಯನ ನಡೆಸುತ್ತಿರುವಾಗಲೇ ಆರಂಭಿಸಿದ್ದೆ. ಬುರ್ಜ್ ಖಲೀಫಾದಲ್ಲಿ ನನ್ನ 25 ವರ್ಷದ ಸಿನಿಮಾ ಪಯಣದ ವಿಡಿಯೊ ಬರುತ್ತದೆ ಎಂದು ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.