ಮುಂಬೈ, ಜ. 13 (DaijiworldNews/MB) : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಬಳಿಕ ಪಾಪರಾಜಿಗಳು (ಛಾಯಾಚಿತ್ರಕಾರರು) ಮಗುವಿನ ಫೋಟೋ ತೆಗೆಯಲು ದೌಡಾಯಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಛಾಯಾಚಿತ್ರಕಾರರಲ್ಲಿ ಒಂದು ಮನವಿ ಮಾಡಿದ್ದಾರೆ. ''ಮಗಳ ಫೋಟೋ ತೆಗೆಯಬೇಡಿ, ಆಕೆಯ ಖಾಸಗಿತನಕ್ಕೆ ಗೌರವ ನೀಡಿ'' ಎಂದು ತಿಳಿಸಿದ್ದಾರೆ.
ಮುಂಬೈನ ಪಾಪರಾಜಿಗಳಿಗೆ ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ವಿರುಷ್ಕಾ, ''ಇಷ್ಟು ವರ್ಷಗಳಿಂದ ನೀವು ನಮಗೆ ನೀಡಿದ ಪ್ರೀತಿಗೆ ಧನ್ಯವಾದಗಳು. ಈ ಮಹತ್ವದ ಸಂದರ್ಭವನ್ನು ನಿಮ್ಮೊಂದಿಗೆ ಆಚರಿಸಲು ನಾವು ಸಂತೋಷಪಡುತ್ತೇವೆ. ಪೋಷಕರಾದ ನಾವು ನಿಮಗೆ ಸರಳವಾದ ವಿನಂತಿಯನ್ನು ಮಾಡುತ್ತೇವೆ. ನಮ್ಮ ಮಗುವಿನ ಗೌಪ್ಯತೆಯನ್ನು ರಕ್ಷಿಸಲು ನಾವು ನಿಮ್ಮಲ್ಲಿ ಸಹಾಯ ಹಾಗೂ ಬೆಂಬಲ ಕೋರುತ್ತೇವೆ'' ಎಂದಿದ್ದಾರೆ.
''ನೀವು ನಮ್ಮ ಬಗ್ಗೆ ಸುದ್ದಿ ಮಾಡಲು ಬೇಕಾದ ಎಲ್ಲಾ ವಿಚಾರವನ್ನು ಸಂದರ್ಭಕ್ಕೆ ಅನುಗುಣವಾಗಿ ನಾವು ನೀಡುತ್ತೇವೆ. ಆದರೆ ಪ್ರಸ್ತುತ ನಮ್ಮ ಮಗುವಿನ ಬಗ್ಗೆಗಿನ ಯಾವುದೇ ವಿಚಾರಗಳನ್ನು ಸುದ್ದಿ ಮಾಡಬಾರದಾಗಿ ತಮ್ಮಲ್ಲಿ ವಿನಂತಿಸುತ್ತೇವೆ. ನೀವು ಅರ್ಥೈಸಿಕೊಳ್ಳುವಿರಿ ಎಂದು ನಾವು ನಂಬಿದ್ದೇವೆ, ಧನ್ಯವಾದಗಳು'' ಎಂದು ಹೇಳಿದ್ದಾರೆ.
ಈ ಬಗ್ಗೆ ಈ ಹಿಂದೆ ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, ''ನಮಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ. ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಶುಭಾಶಯಕ್ಕಾಗಿ ಧನ್ಯವಾದಗಳು. ಅನುಷ್ಕಾ ಹಾಗೂ ಮಗು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬಹುದು ಎಂದು ನಾನು ಭಾವಿಸುತ್ತೇವೆ'' ಎಂದು ತಿಳಿಸಿದ್ದರು.
2017ರ ಡಿಸೆಂಬರ್ 11 ವಿರುಷ್ಕಾ ಜೋಡಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.