ಪುತ್ತೂರು, ಜ.11 (DaijiworldNews/PY): "ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯದ ಜೊತೆಗೆ ಉತ್ತಮ ಕಲಾಪ್ರೇಕ್ಷಕರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಬಹುವಚನಂನ ಕಾಳಜಿ ಶ್ಲಾಘನೀಯ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಾಯೋಜಕತ್ವದಲ್ಲಿ ಪುತ್ತೂರು ದರ್ಬೆ ವಿದ್ಯಾನಗರದಲ್ಲಿ ಬಹುವಚನಂ ಆಯೋಜಿಸಿದ್ದ ಶ್ರೀಗೋಪಾಲಕೃಷ್ಣ ಬೊಂಬೆಯಾಟ ಮಂಡಳಿ ಕಾಸರಗೋಡು ಇವರ ಬೊಂಬೆಯಾಟ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
"ಬೊಂಬೆಯಾಟದಂತಹ ಪರಂಪರಾಗತ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ರಮೇಶ್ ಕೆ.ವಿ. ಅವರು ಶ್ರಮಿಸುತ್ತಿದ್ದು, ಅಂತಹ ಕಲೆಯನ್ನು ವೀಕ್ಷಿಸುವ ನಿಟ್ಟಿನಲ್ಲಿ ಉತ್ತಮ ಪ್ರೇಕ್ಷಕವರ್ಗವನ್ನು ಡಾ.ಶ್ರೀಶ ಕುಮಾರ್ ಸಿದ್ಧಗೊಳಿಸುತ್ತಿದ್ದಾರೆ. ಇಂತಹ ಕಾರ್ಯ ಹೆಚ್ಚು ಹೆಚ್ಚು ನಡೆಯಲಿ" ಎಂದು ಅವರು ಹಾರೈಸಿದರು.
ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿಯವರು, ಕಲಾವಿದ ರಮೇಶ್ ಕೆ.ವಿ. ಅವರನ್ನು ಗೌರವಿಸಿದರು.
ಕಲಾವಿದ ನಾಗರಾಜ ನಿಡ್ವಣ್ಣಾಯ ಬೊಂಬೆಯಾಟ ತಂಡದ ಕಲಾವಿದರಿಗೆ ಸ್ಮರಣಿಕೆ ನೀಡಿದರು. ರಂಗಕರ್ಮಿ ಐಕೆ ಬೊಳುವಾರು ಸ್ವಾಗತಿಸಿ, ಬಹುವಚನಂನ ಡಾ.ಶ್ರೀಶ ಕುಮಾರ್ ಎಂ.ಕೆ. ವಂದಿಸಿದರು.
ಬಳಿಕ ಕಾಸರಗೋಡು ಶ್ರೀಗೋಪಾಲಕೃಷ್ಣ ಬೊಂಬೆಯಾಟ ಸಂಘದವರು ನರಕಾಸುರ ವಧೆ ಗರುಡ ಗರ್ವಭಂಗ ಬೊಂಬೆಯಾಟ ಪ್ರದರ್ಶಿಸಿದರು.