ಬೆಂಗಳೂರು, ಡಿ.24 (DaijiworldNews/HR): ಗಿರೀಶ ಕಾಸರವಳ್ಳಿ ನಿರ್ದೇಶಿಸಿರುವ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ರೋಮ್ನಲ್ಲಿ ನಡೆದ ಪ್ರತಿಷ್ಠಿತ ಏಷ್ಯಾಟಿಕಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದೆ.
ಈ ಸಿನಿಮಾ ನಿರ್ಮಾಪಕ ಎಸ್.ವಿ. ಶಿವಕುಮಾರ್ ಸಂಗಮ ಫಿಲಂಸ್ ಲಾಂಛನದಲ್ಲಿ ನಿರ್ಮಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದರಲ್ಲಿದ್ದು, ಹಳ್ಳಿ ಮತ್ತು ನಗರ ನಡುವಿನ ಜೀವನ ಮತ್ತು ನಗರದ ಯಾಂತ್ರೀಕೃತ ಜೀವನ ಶೈಲಿ, ಪರಕೇಂದ್ರಿತ ಬದುಕು ಮತ್ತು ಸ್ವಕೇಂದ್ರಿತ ಬದುಕು, ಈ ತರಹದ ದ್ವಂದ್ವಾತ್ಮಕ ಜೀವನವಿರುವ ನಮ್ಮ ಬದುಕು ಎತ್ತ ಸಾಗಿದೆ? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯಲ್ಲಿದೆ.
ಇನ್ನು ಈ ಸಿನಿಮಾದ ತಾರಾಗಣದಲ್ಲಿ ದ್ರುಶಾ ಕೊಡಗು, ಆರಾಧ್ಯಾ, ಪ್ರವರ್ಥ ರಾಜು ಮತ್ತು ನಲ್ಮೆ, ಪವಿತ್ರಾ, ಮಾಲತೇಶ್, ಕೆ.ಜಿ. ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ. ವೆಂಕಟೇಶ್, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಇದ್ದಾರೆ.