ಬೆಂಗಳೂರು, ಡಿ.22 (DaijiworldNews/HR): ಸಾಹಿತಿ ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ರೈತ ಹೋರಾಟದ ಹೊಸ ಸಿನಿಮಾ 'ಕೊಳಗ' ಪ್ರಸನ್ನ ಗೂರಲಕೆರೆ ನಿರ್ದೇಶನದಲ್ಲಿ ಮೂಡಿಬರಲಿದೆ.
ಈ ಸಿನಿಮಾಗೆ ನಿರ್ದೇಶಕರ ಪತ್ನಿ ನಿಶಿತಾ ಗೌಡ ಚಿತ್ರ ಕಥೆ ಹೆಣೆಯುವ ಜತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಕಿಶೋರ್ ನಟಿಸುತ್ತಿದ್ದಾರೆ.
ಇನ್ನು ಈ ಚಿತ್ರದ ಮುಹೂರ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಶಾಂಭ ದೇವಸ್ಥಾನದಲ್ಲಿ ನಡೆದಿದ್ದು, ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ಆಯುರ್ವೇದ ವೈದ್ಯ ಡಾ.ಅಶೋಕ್, ನಿರ್ದೇಶಕರಾದ ಎಸ್. ನಾರಾಯಣ್, ಕೋಡ್ಲು ರಾಮಕೃಷ್ಣ, ಅವಿನಾಶ್ ಯು. ಶೆಟ್ಟಿ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಎಸ್. ನಾರಾಯಣ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು.
ಸಿನಿಮಾಗೆ ಬಗ್ಗೆ ಹಂಚಿಕೊಂಡ ನಿರ್ದೇಶಕ ಪ್ರಸನ್ನ, "ಇಪ್ಪತ್ತು ವರ್ಷಗಳ ಕಾಲ ನಡೆದ ದೊಡ್ಡ ರೈತ ಹೋರಾಟದ ಕಥಾನಕ ಇದಾಗಿದ್ದು, ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಚಳವಳಿಯ ವಿಚಾರಗಳು ನನ್ನ ಮನದಲ್ಲಿದ್ದವು. ಆಗಿನ ಕಾಲದಲ್ಲಿ ರೈತ ತನ್ನ ಭೂಮಿಯ ಮೇಲೆ ಭಾವನಾತ್ಮಕ ಸಂಬಂಧ ಹೊಂದಿದ್ದ. ಇತ್ತೀಚಿನ ದಿನಗಳಲ್ಲಿ ಅದು ಕ್ಷೀಣಿಸುತ್ತಿದೆ. ಆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ" ಎನ್ನುತ್ತಾರೆ.
ಇನ್ನು "ಈವರೆಗೆ ನಾನು 30 ಸಿನಿಮಾಗಳನ್ನು ನಿರ್ದೇಶಿಸಿದ್ದು, ಅದರಲ್ಲಿ 15 ಕಾದಂಬರಿ ಆಧರಿತ ಚಿತ್ರಗಳೇ ಆಗಿವೆ. ಆದರೆ, ನಾ.ಡಿಸೋಜಾ ಅವರ ಕಾದಂಬರಿ ಅಥವಾ ಕಥೆಯನ್ನು ನಾನು ಚಿತ್ರ ಮಾಡಲಿಲ್ಲವೆನ್ನುವ ಬೇಸರ ನನ್ನಲ್ಲಿ ಯಾವಾಗಲೂ ಕಾಡುತ್ತದೆ. ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್ ಕಾಸರವಳ್ಳಿ ಈ ಹಿಂದೆ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಚಲನಚಿತ್ರ ಕೈಗೆತ್ತಿಕೊಂಡಿದ್ದು ನಿಮ್ಮ ಪ್ರಯತ್ನ ಫಲಿಸಲಿ" ಎಂದು ನಿರ್ದೇಶಕ ಕೋಡ್ಲು ರಾಮಕೃಷ್ಣ ಹಾರೈಸಿದ್ದಾರೆ.