ಬೆಂಗಳೂರು,ಡಿ.19 (DaijiworldNews/HR): ನಿರ್ದೇಶಕ ಸಂತೋಷ್ ಕೊಡೆಂಕೇರಿ ಅವರು ತನ್ನ ಚಿಕ್ಕ ವಯಸ್ಸಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮದಲ್ಲಿದ್ದ ಸೇತುವೆಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡು, ಈ ಸೇತುವೆ ನಿರ್ಮಿಸಿರುವ ಗಿರೀಶ್ ಭಾರದ್ವಾಜ್ ಅವರ ಬಗ್ಗೆ ಹೊಸ ಸಿನೆಮಾವೊಂದನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಹೊಸ ಸಿನಿಮಾಗೆ 'ದ ಬ್ರಿಡ್ಜ್ ಮ್ಯಾನ್' ಎಂಬ ಹೆಸರನ್ನಿಡಲಾಗಿದ್ದು, ಇದು ಮುಂದಿನ ತಿಂಗಳಿನಿಂದ ತಯಾರಾಗಲಿದೆ.
ಈ ಕುರಿತು ಮಾತನಾಡಿರುವ ನಿರ್ದೇಶಕ ಸಂತೋಷ್, "ಗಿರೀಶ್ ಭಾರದ್ವಾಜ್ ಅವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದಾಗಲೇ ಸಿನಿಮಾ ಮಾಡಬೇಕೆಂದು ನಿಶ್ಚಯಿಸಿದ್ದೆವು, ಈ ಚಿತ್ರಕ್ಕೆ ಕಲಾವಿದರು, ಸಿಬ್ಬಂದಿ, ತಂತ್ರಜ್ಞರ ತಂಡವನ್ನು ಆಯ್ಕೆ ಮಾಡುತ್ತಿದ್ದೇವೆ" ಎಂದರು.
ಇನ್ನು ದೇಶಾದ್ಯಂತ 125 ಸೇತುವೆಗಳನ್ನು ಗಿರೀಶ್ ಭಾರದ್ವಾಜ್ ಯಾವ ರೀತಿಯಾಗಿ ನಿರ್ಮಿಸಿದ್ದಾರೆ ಎಂಬುದು ಕಥೆಯಲ್ಲಿದ್ದು, ಸೇತುವೆ ಮೂಲಕ ಎರಡು ಹಳ್ಳಿಗಳ ಮಧ್ಯೆ ಸಂಪರ್ಕವನ್ನು ಹೇಗೆ ನಿರ್ಮಿಸಿದರು ಎಂಬುದನ್ನು ತೋರಿಸಲಾಗುತ್ತದೆ.
ಗಿರೀಶ್ ಭಾರದ್ವಾಜ್ ಅವರ ಊರು ಸುಳ್ಯದ ಸಮೀಪ ಸಣ್ಣ ಹಳ್ಳಿ ಅದಕ್ಕೆ ಉಳಿದ ಪ್ರದೇಶಗಳೊಂದಿಗೆ ಸಂಪರ್ಕವಿರಲಿಲ್ಲ. ಜನರು ದೋಣಿಗಳ ಮೂಲಕ ಶಾಲೆ, ಆಸ್ಪತ್ರೆಗಳಿಗೆ ಹೋಗುತ್ತಿದ್ದರಂತೆ. ಇದನ್ನೆಲ್ಲ ಗಮನಿಸಿದ ಭಾರದ್ವಾಜ್ ಗ್ರಾಮಸ್ಥರ ಸಹಕಾರದಿಂದ ಸೇತುವೆ ನಿರ್ಮಿಸಿದ ಕಥೆಯನ್ನು ಇಲ್ಲಿ ಚಿತ್ರೀಕರಿಸುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ.