ಮುಂಬೈ, ಡಿ.09 (DaijiworldNews/MB) : ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ನಟ ಸೋನು ಸೂದ್ ಮುಂಬೈನಲ್ಲಿರುವ ತನ್ನ 8 ಆಸ್ತಿಗಳನ್ನು ಅಡವಿಟ್ಟಿದ್ದಾರೆ.
ತನಗೆ 10 ಕೋಟಿ ರೂಪಾಯಿಯ ಅವಶ್ಯಕತೆ ಎದುರಾದ ಕಾರಣದಿಂದ ಸೋನು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಜುಹುವಿನಲ್ಲಿರುವ 8 ಆಸ್ತಿ ಮೂಲಗಳನ್ನು ಅಡವಿಟ್ಟಿದ್ದು ಈ ಪೈಕಿ 2 ಅಂಗಡಿಗಳು, 6 ಫ್ಲಾಟ್ ಇದೆ ಎಂದು ಹೇಳಲಾಗಿದೆ.
ಸೋನು ಸೂದ್ ಅವರು ಕಳೆದ ಸೆಪ್ಟೆಂಬರ್ 15ರಂದು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ನವೆಂಬರ್ 24ಕ್ಕೆ ರಿಜಿಸ್ಟರ್ ಆಗಿದೆ ಎನ್ನಲಾಗಿದೆ.
ಇನ್ನು ಈ ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿಯ ಹೆಸರಿನಲ್ಲಿಯೇ ಇದ್ದು ಅವರು ತಿಂಗಳ ಬಾಡಿಗೆಗಳನ್ನು ಕೂಡಾ ಪಡೆಯಬಹುದಾಗಿದೆ. ಆದರೆ 10 ಕೋಟಿ ರೂಪಾಯಿ ಸಾಲಕ್ಕೆ ಬಡ್ಡಿ ನೀಡಬೇಕಾಗುತ್ತದೆ ಎಂದು ವರದಿ ತಿಳಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ಹಲವು ಮಂದಿಗೆ ಸಹಾಯ ಮಾಡಿದ್ದ ಸೋನುಸೂದ್ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ಮನೆಗೆ ತಲುಪಲು ನೆರವಾಗಿದ್ದಾರೆ. ರೈತರೊಬ್ಬರಿಗೆ ಹೊಲದಲ್ಲಿ ಊಳಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿದ್ದರು. ಅಷ್ಟೇ ಅಲ್ಲದೇ ಅನೇಕ ಹೆಣ್ಣು ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ. ಇನ್ನು ಕೆಲವರ ಸರ್ಜರಿ ಮಾಡಿಸಲು ಕೂಡ ಹಣ ಸಹಾಯ ಮಾಡಿದ್ದರು.