ನವದೆಹಲಿ, ನ. 26 (DaijiworldNews/MB) : ಪ್ರತಿಷ್ಠಿತ ಆಸ್ಕರ್ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಸಿನಿಮಾ "ಜಲ್ಲಿಕಟ್ಟು" ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್ಎಫ್ಐ) ಪ್ರಕಟನೆಯಲ್ಲಿ ತಿಳಿಸಿದೆ.
ಹಳ್ಳಿಯೊಂದರಲ್ಲಿ ಕಸಾಯಿಖಾನೆಯಿಂದ ತಪ್ಪಿಸಿಕೊಳ್ಳುವ ಗೂಳಿಯೊಂದನ್ನು ಹಿಡಿಯಲು ಪಡುವ ಪ್ರಯತ್ನವನ್ನೇ ಬಹಳ ಕಾತುರತೆ ಹುಟ್ಟಿಸುವಂತೆ ಎಣೆಯಲಾಗಿದೆ. ಭಾರತ ವಿವಿಧ ಭಾಷೆಗಳ ಒಟ್ಟು 27 ಸಿನಿಮಾಗಳು ಆಸ್ಕರ್ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ನಾಮನಿರ್ದೇಶನದ ಪಟ್ಟಿಯಲ್ಲಿದ್ದವು ಈ ಸಿನಿಮಾಗಳ ಪೈಕಿ ತೀರ್ಪುಗಾರರು "ಜಲ್ಲಿಕಟ್ಟು" ಸಿನಿಮಾವನ್ನು ನಾಮನಿರ್ದೇಶನ ಮಾಡಿದ್ದಾರೆ.
2019 ರಲ್ಲಿ, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಜೊಯಾ ಅಖ್ತರ್ ಅವರ "ಗಲ್ಲಿ ಬಾಯ್" ಸಿನಿಮಾ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿತ್ತು.
ಹರೀಶ್ ಅವರ "ಮಾವೋಯಿಸ್ಟ್" ಎಂಬ ಸಣ್ಣ ಕಥೆಯನ್ನು ಆಧರಿಸಿ ಮಾಡಲಾಗಿರುವ ಈ "ಜಲ್ಲಿಕಟ್ಟು" ಸಿನಿಮಾವು ಸೆಪ್ಟೆಂಬರ್ 6, 2019 ರಂದು 2019 ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು.
ಈ ಸಿನಿಮಾದ ನಿರ್ದೇಶಕರಾದ ಪೆಲ್ಲಿಸ್ಸೇರಿ ಕಳೆದ ವರ್ಷ ನಡೆದ ಭಾರತದ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮೊನ್ ಅಬ್ದುಸಮದ್ ಮತ್ತು ಸಂತಿ ಬಾಲಚಂದ್ರನ್ ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ.