ಬೆಂಗಳೂರು, ನ.19 (DaijiworldNews/HR): ಕನ್ನಡ ಸಿನಿಮಾ ಆ್ಯಕ್ಟ್ 1978 ನ.20 ರಂದು ಬಿಡುಗಡೆಯಾಗಲು ಸಜ್ಜುಗೊಂಡಿದ್ದು, ಈ ಕುರಿತು ನಿರ್ದೇಶಕ ಮಂಸೋರೆಯವರು ಚಿತ್ರದ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಈ ಸಿನಿಮಾದಲ್ಲಿ ಯಾವುದೇ ಗಿಮಿಕ್ಸ್ ಗಳನ್ನೂ ಬಳಕೆ ಮಾಡಿಲ್ಲ, ಉತ್ತಮ ವಿಚಾರವನ್ನೊಳಗೊಂಡಿರುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಈ ಸಿನಿಮಾದಲ್ಲಿ ತಮ್ಮ ಜೀವನದಲ್ಲಾದ ಕೆಲ ಅನುಭವಗಳನ್ನು ಹಂಚಿಕೊಂಡಿದ್ದಾರೆ, ನನ್ನ ತಂದೆ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸೇವೆಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರು. ತಂದೆ ನಿಧನದ ಬಳಿಕ ಬರುತ್ತಿದ್ದ ಪಿಂಚಣಿ ಹಣವನ್ನು ತೆಗೆದುಕೊಳ್ಳಲು ಸರ್ಕಾರಿ ಕಚೇರಿಗೆ ತೆರಳಿದಾಗ ಅಲ್ಲಿನ ಕಠಿಣ ಪರಿಸ್ಥಿತಿಗಳು ನನ್ನ ಅನುಭವಕ್ಕೆ ಸಿಕ್ಕಿತ್ತು. ಅಧಿಕಾರಿಗಳು ಕೇಸ್ ಗಳನ್ನು ನಿಭಾಯಿಸುವ ರೀತಿಯನ್ನು ನೋಡಿದರೆ ಭಯವಾಗುತ್ತದೆ. ಮೊದಲನೇ ಮಹಡಿಯಲ್ಲಿರುವ ಮತ್ತೊಬ್ಬ ಸಹೋದ್ಯೋಗಿ ತೆಗೆದುಕೊಂಡ ಕಡತವನ್ನು ಮೂರನೇ ಮಹಡಿಯಲ್ಲಿರುವ ಮತ್ತೊಬ್ಬ ಸಿಬ್ಬಂದಿ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ನಾನು ಧ್ವನಿ ಎತ್ತಿದ್ದೆ, ಮಾಧ್ಯಮಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದೆ. ಬಳಿಕವಷ್ಟೇ ಪಿಂಚಣಿ ಹಣದ ನೀಡುವ ಪ್ರಕ್ರಿಯೆ ಮುಂದಕ್ಕೆ ಸಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಈ ಸಿನಿಮಾ ನನ್ನ ಮೊದಲ ಪ್ರಯತ್ನವಾಗಿದ್ದು, ಸಿನಿಮಾ ನಿರ್ದೇಶನ ಮಾಡುವುದಕ್ಕೂ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕಿತ್ತು. ಈ ಸಿನಿಮಾದಲ್ಲಿ 48 ನಟರು ನಟಿಸಿದ್ದು, ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ರವಿ ಭಟ್, ಶ್ರುತಿ , ಸಂಚಾರಿ ವಿಜಯ್ ಸೇರಿದಂತೆ ದೊಡ್ಡ ಕಲಾವಿದರ ದಂಡು ಈ ಚಿತ್ರ ತಂಡದಲ್ಲಿದೆ.