ಮುಂಬೈ, ನ. 18 (DaijiworldNews/MB) : ಇತ್ತೀಚೆಗೆ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ, "ನನ್ನ ಸ್ವಂತ ದೇಶದಲ್ಲಿ ಗುಲಾಮರಂತೆ ಪರಿಗಣಿಸಲ್ಪಟ್ಟಿದ್ದರಿಂದ ಬೇಸತ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿದ್ದೇವೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರಣಾವತ್, "ನನ್ನ ದೇಶದಲ್ಲಿ ನಾನು ಗುಲಾಮಳಂತೆ ಪರಿಗಣಿಸಲ್ಪಟ್ಟಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದೇವೆ ಹಾಗೂ ಬೇಸತ್ತಿದ್ದೇನೆ. ನಮ್ಮ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲ. ಸತ್ಯವನ್ನು ಮಾತನಾಡಲು ಸಾಧ್ಯವಿಲ್ಲ ಮತ್ತು ನಮ್ಮ ಪೂರ್ವಜರನ್ನು ರಕ್ಷಿಸಲು ಸಾಧ್ಯವಿಲ್ಲ, ಭಯೋತ್ಪಾದನೆಯನ್ನು ನಾವು ಖಂಡಿಸಲು ಸಾಧ್ಯವಿಲ್ಲ, ಅಂತಹ ನಾಚಿಕೆಗೇಡಿನ ಗುಲಾಮಗಿರಿಯ ಜೀವನವನ್ನು ಕತ್ತಲೆಯ ರಕ್ಷಕರಿಂದ ನಿಯಂತ್ರಿಸುವುದೇನು?" ಎಂದು ಪ್ರಶ್ನಿಸಿದ್ದಾರೆ.
"ಟ್ವೀಟರ್ನ ಪಕ್ಷಪಾತ ಮತ್ತು ಇಸ್ಲಾಮಿಸ್ಟ್ ಪ್ರಚಾರವು ಮುಜುಗರಕ್ಕೊಳಗಾಗುತ್ತದೆ. @TIinExile ಅಕೌಂಟನ್ನು ಯಾಕೆ ಡಿಲೀಟ್ ಮಾಡಿದ್ದೀರಿ? ಏಕೆಂದರೆ ಅವರು ನಮ್ಮ ಇತಿಹಾಸದ ನಕಲಿ ಚಿತ್ರಣಕ್ಕೆ ತಡೆಯೊಡ್ಡಿದರೆಂದೇ? ನಿಮಗೆ ನಾಚಿಕೆಯಾಗಬೇಕು. ಟ್ವೀಟರ್ ಕೂಡಾ ಭಾರತದಲ್ಲಿ ಬ್ಯಾನ್ ಆಗುವುದಕ್ಕಾಗಿ ಕಾಯುತ್ತಿದ್ದೇನೆ. ಪ್ರಧಾನ ಮಂತ್ರಿ ಕಚೇರಿ ಟ್ವಿಟರ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.
ಈಗಾಗಲೇ ಕಂಗನಾ ಹಾಗೂ ಅವರ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿವಾದಾತ್ಮಕ ಪೋಸ್ಟ್ ಮಾಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಯತ್ನ ಮಾಡಿದ ಆರೋಪದಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಎರಡು ಬಾರಿ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದು, ಎರಡು ಬಾರಿಯೂ ಕೂಡಾ ಒಂದಲ್ಲ ಒಂದು ನೆಪವೊಡ್ಡಿ ಸಹೋದರಿಯರು ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಈಗ ಮತ್ತೆ ಮೂರನೇ ಬಾರಿಗೆ ಸಮನ್ಸ್ ಜಾರಿಗೊಳಿಸಿರುವ ಮುಂಬೈ ಪೊಲೀಸರು ನವೆಂಬರ್ 23 ಮತ್ತು 24ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.