ಬೆಂಗಳೂರು, ನ.15 (DaijiworldNews/HR): ನಟ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇದೀಗ ಈ ಸಿನಿಮಾದ ಮೂಲಕ ಬಾಲಿವುಡ್ ನಟ ಮುಖೇಶ್ ರಿಷಿ ಮತ್ತೆ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಆಗಿದ್ದಾರೆ.
ಜೇಮ್ಸ್ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾ ಆನಂದ್ ಆಯ್ಕೆಯಾಗಿದ್ದು, ಅನು ಪ್ರಭಾಕರ್ ಚಿತ್ರತಂಡ ಸೇರಿದ್ದು, ಇದೀಗ ಹಲವು ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಮುಖೇಶ್ ರಿಷಿ ಜೇಮ್ಸ್ ಸಿನಿಮಾದಲ್ಲಿ ನಟಿಸಲಿದ್ದಾರೆ.
ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದು, ಈ ವರ್ಷದ ಆರಂಭದಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿ ಚಿಕ್ಕ ಆ್ಯಕ್ಷನ್ ದೃಶ್ಯದ ಚಿತ್ರೀಕರಣ ನಡೆಸಿತ್ತು. ಬಳಿಕ ಕೊರೊನಾದ ಹಿನ್ನೆಲೆ ಚಿತ್ರಿಕರಣ ನಿಲ್ಲಿಸಿದ್ದು, ಇದೀಗ ಮತ್ತೆ ಚಿತ್ರೀಕರಣ ಆರಂಭವಾಗಿದೆ.
ಇನ್ನು ಬಹುಭಾಷಾ ನಟರಾದ ಮುಖೇಶ್ ರಿಷಿ ವಿಲನ್ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದು, ಈ ಹಿಂದೆ ಹಲವು ಕನ್ನಡ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.