ಬೆಂಗಳೂರು, ಅ. 14 (DaijiworldNews/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಮಾರ್ಚ್ನಲ್ಲಿ ಮುಚ್ಚಿದ್ದ ಸಿನೆಮಾ ಥಿಯೇಟರ್ಗಳು ಸುಮಾರು ಆರು ತಿಂಗಳುಗಳ ಬಳಿಕ ನಾಳೆ ಅಕ್ಟೋಬರ್ 15 ರಂದು ತೆರೆಯಲಿದ್ದು ಸಿನಿ ಪ್ರಿಯರು ಥಿಯೇಟರ್ನಲ್ಲಿ ತಮ್ಮ ನೆಚ್ಚಿನ ಸಿನಿಮಾಗಳನ್ನು ವೀಕ್ಷಿಸಲು ಕಾತುರರಾಗಿದ್ದಾರೆ.
ಲಾಕ್ಡೌನ್ ಮುಗಿದ ಬಳಿಕ ನಿಯಮಗಳನ್ನು ಸಡಿಲಿಕೆ ಮಾಡುತ್ತಾ ಬಂದ ಸರ್ಕಾರವು ಅಕ್ಟೋಬರ್ 15 ರಿಂದ ಥಿಯೇಟರ್ ತೆರೆಯಲು ಅವಕಾಶ ನೀಡಿದ್ದು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ. ಥಿಯೇಟರ್ನ ಒಳಗೆ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಸ್ಯಾನಿಟೈಝರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಾಗೆಯೇ ಥಿಯೇಟರ್ನ ಹೊರಗಡೆ ಕೆಫೆಟೇರಿಯಾದಲ್ಲಿ ಪ್ಯಾಕಿಂಗ್ ಆಹಾರಗಳ ಪೂರೈಕೆಗೆ ಮಾತ್ರ ಅವಕಾಶ ನೀಡಲಾಗಿದೆ.
ಇನ್ನು ಮತ್ತೆ ಥಿಯೇಟರ್ನಲ್ಲೇ ಸಿನಿಮಾ ನೋಡಲು ಲಭಿಸಿರುವ ಅವಕಾಶದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಿನಿಮಾ ವಿಮರ್ಶಕ ಹೃದಯ ರಂಜನ್ ಎಂಬವರು, ಕೊನೆಗೂ ನಾವು ಸಹಜ ಜೀವನದತ್ತ ಹೆಜ್ಜೆ ಇಡುತ್ತಿದ್ದೇವೆ ಎಂಬುದು ಸಂತಸದ ವಿಚಾರ. ಇತ್ತೀಚೆಗೆ ಕೆಲವು ಬಿಗ್ ಬಜೆಟ್ ಸಿನಿಮಾಗಳು ಒಟಿಟಿ ಪ್ಲಾಟ್ ಫಾರ್ಮ್ನಲ್ಲಿ ಬಿಡುಗಡೆಯಾಗಿದ್ದು ಮನೆಯಲ್ಲೇ ಕುಳಿತು ನಾವು ವೀಕ್ಷಿಸುವ ಅವಕಾಶ ಲಭಿಸಿತ್ತು. ಈಗ ಬಹಳ ತಿಂಗಳುಗಳ ಬಳಿಕ ಥಿಯೇಟರ್ ತೆರೆದಿದೆ. ಆದರೆ ಈ ಸಂದರ್ಭದಲ್ಲಿ ಹೆಚ್ಚು ಜನರು ಸಿನಿಮಾ ನೋಡಲು ಬರುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಯುವಕರು, ಪ್ರೇಮಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸಿನಿಮಾ ನೋಡಲು ಬರಬಹುದೇ ಎಂಬ ಪ್ರಶ್ನೆ ಇದೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇನ್ನು ನಟ ಸುಮನ್ ನಗರ್ ಕರ್ ಅವರು, ಸದ್ಯ ನಾನು ಥಿಯೇಟರ್ಗೆ ಹೋಗಿ ಸಿನಿಮಾ ನೋಡುವುದಿಲ್ಲ. ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಕೆಲ ದಿನಗಳ ಬಳಿಕ ಥಿಯೇಟರ್ಗೆ ತೆರಳುತ್ತೇನೆ. ಎಷ್ಟೇ ಸುರಕ್ಷತೆ ವಹಿಸಿದರೂ ಕೂಡಾ ಥಿಯೇಟರ್ಗಳು ನಾಲ್ಕು ಗೋಡೆಯ ಮಧ್ಯೆ ಮುಚ್ಚಲ್ಪಟ್ಟಿರುವ ಸ್ಥಳ. ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ ಥಿಯೇಟರ್ಗೆ ಹೋಗಲ್ಲ. ಕೆಲ ದಿನಗಳು ಕಳೆದ ಬಳಿಕ ಕುಟುಂಬದೊಂದಿಗೆ ತೆರಳುತ್ತೇನೆ ಎಂದು ಹೇಳಿದ್ದಾರೆ.
ಶಾರೂಕ್ ಖಾನ್ ಫ್ಯಾನ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ದೀಪಕ್ ಕುಲಕರ್ಣಿ, ಸದ್ಯ ಥಿಯೇಟರ್ಗಳು ತೆರೆಯದಿದ್ದರೆಯೇ ಉತ್ತಮ. ಶಾರುಖ್ ಅವರ ಅಭಿಮಾನಿಯಾಗಿ ಅವರನ್ನು ತೆರೆಯ ಮೇಲೆ ನೋಡಲು ನನಗೂ ಆಸೆಯಿದೆ. ಆದರೆ ಈ ಕೊರೊನಾ ಪ್ರಕರಣಗಳ ಹೆಚ್ಚಳ ಕಡಿಮೆಯಾಗುವವರೆಗೂ ಸುರಕ್ಷತೆ ಅತೀ ಮುಖ್ಯ ಎನ್ನುತ್ತಾರೆ.
ನಾಳೆ ಥಿಯೇಟರ್ ಪುನರ್ ಆರಂಭವಾದ ಬಳಿಕ ಕನ್ನಡದಲ್ಲಿ ಶಿವಾರ್ಜುನ, ಶಿವಾಜಿ ಸುರತ್ಕಲ್, ಲವ್ ಮಾಕ್ಟೇಲ್, ಹಿಂದಿಯಲ್ಲಿ ಪಿಎಂ ನರೇಂದ್ರ ಮೋದಿ, ತಪ್ಪಡ್, ಶುಭ ಮಂಗಲ್ ಜ್ಯಾದ ಸಾವಧಾನ್, ಇಂಗ್ಲಿಷ್ ನಲ್ಲಿ ಫೋರ್ಡ್ ವರ್ಸಸ್ ಫೆರ್ರಾರಿ ನೈವ್ಸ್ ಔಟ್, ಲಯನ್ ಕಿಂಗ್ ಮತ್ತೆ ಪ್ರದರ್ಶನ ಕಾಣಲಿವೆ.