ಸೂರತ್, ಅ. 11 (DaijiworldNews/MB) : ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 78 ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರೋದ್ಯಮ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಫ್ಯಾನ್ಸ್ಗಳು ಶುಭ ಹಾರೈಸಿದ್ದು ಈ ನಡುವೆ ಸೂರತ್ನ ಸೂಪರ್ಫ್ಯಾನ್ ಓರ್ವ ಸುಮಾರು 7 ಸಾವಿರಕ್ಕೂ ಅಧಿಕ ಚಿತ್ರಗಳಿರುವ ಆಲ್ಬಮ್ ಗಿಫ್ಟ್ ನೀಡಿದ್ದಾರೆ.
ಸೂರತ್ ಮೂಲದ ಬಚ್ಚನ್ ಅಭಿಮಾನಿ ದಿವ್ಯೇಶ್ ಕುಮಾರ್ 2 ದಶಕಗಳಿಂದ ಬಚ್ಚನ್ ಅವರ ಸುಮಾರು 7 ಸಾವಿರಕ್ಕೂ ಅಧಿಕ ಭಾವಚಿತ್ರಗಳನ್ನು ಸಂಗ್ರಹಿಸಿದ್ದು ಇದರಲ್ಲಿ ಪಾಸ್ಪೋರ್ಟ್ ಅಳತೆಯ ಚಿತ್ರದಿಂದ ಹಿಡಿದು ಕ್ಯಾನ್ವಾಸ್ವರೆಗಿನ ನಾನಾ ಅಳತೆಯ ನಾನಾ ರೂಪದ ಭಾವಚಿತ್ರಗಳಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ದಿವ್ಯೇಶ್, ''ಅಮಿತಾಬ್ ಅವರ ಚಿತ್ರಗಳನ್ನು ನಾನು 1999 ರಲ್ಲಿ ಸಂಗ್ರಹಿಸಲು ಆರಂಭಿಸಿದ್ದು ಎಲ್ಲಾ ರೀತಿಯ ಚಿತ್ರಗಳು ನನ್ನ ಬಳಿಯಿದೆ. ಅವರ ಹೊಸ ಸಿನಿಮಾವನ್ನು ನೋಡಿದ ಬಳಿಕ ಅದರ ಪೋಸ್ಟರ್ನ್ನು ಕತ್ತರಿಸಿ ಆಲ್ಬಮ್ನಲ್ಲಿ ಇಡುತ್ತೇನೆ. ಈವರೆಗೆ 7 ಸಾವಿರಕ್ಕೂ ಅಧಿಕ ಚಿತ್ರಗಳನ್ನು ಸಂಗ್ರಹಿಸಿದ್ದೇನೆ. ಅವರ '102 ನಾಟ್ ಔಟ್' ಚಿತ್ರದಂತೆಯೇ, ಅಮಿತಾಬ್ ಕೂಡ 102 ವರ್ಷ ಬದುಕುತ್ತಾರೆ'ಎಂದು ನಾನು ಭಾವಿಸುತ್ತೇನೆ'' ಎಂದು ಶುಭ ಹಾರೈಸಿದ್ದಾರೆ.
ಇನ್ನು ಈವರೆಗೆ ತಾನು 10 ಬಾರಿ ಬಿಗ್ ಬಿ ಅವರನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿರುವ ದಿವ್ಯೇಶ್, ''ಮೊದಲು ಅವರನ್ನು ಭೇಟಿಯಾದಾಗ ಆವರೆಗೆ ಅವರು ನಟಿಸಿದ ಎಲ್ಲಾ ಸಿನಿಮಾಗಳ ಹೆಸರು ಇರುವ ಚಿತ್ರವೊಂದನ್ನು ನೀಡಿದ್ದೆ. ಆಗ ನಾನು ಅವರ ಮೊಮ್ಮಗಳಿಗೆ ಒಂದು ವಿಶೇಷ ಆಟಿಕೆ ನೀಡಿದ್ದೆ. ಅವರು ಆಗ ಅದು ಹೇಗೆ ಮಾಡಿದ್ದು ಎಂದು ಕೇಳಿದ್ದರು, ಆಗ ನಾನು ಸರ್, 'ಯೆ ತೋಹ್ ಟ್ರೈಲರ್ ಹೈ ಸರ್, ಪಿಕ್ಚರ್ ಅಭಿ ಬಾಕಿ ಹೈ ' (ಇದು ಕೇವಲ ಟ್ರೈಲರ್ ಸರ್, ಸಿನಿಮಾ ಇನ್ನು ಬಾಕಿಯಿದೆ) ಎಂದು ಹೇಳಿದೆ. ಈಗ ಇದು ಅವರಿಗೆ ನಾನು ನೀಡುವ ಉಡುಗೊರೆ'' ಎಂದು ಹೇಳಿದ್ದಾರೆ.
ಇನ್ನು ಸೂಪರ್ಫ್ಯಾನ್ ದಿವ್ಯೇಶ್ ಕುಮಾರ್ ಅವರು, ಅಮಿತಾಬ್ ಬಚ್ಚನ್ ಮರಣದ ಬಳಿಕ ಅಂಗಗಳನ್ನು ದಾನ ಮಾಡಲು ತೀರ್ಮಾನಿಸಿದ ಬಳಿಕ ಅವರು ಕೂಡಾ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಸಹಿ ಹಾಕಿದ್ದಾರೆ.