ಬೆಂಗಳೂರು, ಅ.07 (DaijiworldNews/HR): ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಕೊರೊನಾ ಸಂಕಷ್ಟದ ನಡುವೆಯು ಭರದಿಂದ ಸಾಗುತ್ತಿದ್ದು, ನಾಳೆ ನಟ ಯಶ್ ಅಂತಿಮ ಹಂತದ ಶೂಟಿಂಗ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ ನ ಕ್ರಿಯೇಟಿವ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಈ ತಿಂಗಳಾಂತ್ಯಕ್ಕೆ ಚಿತ್ರೀಕರಣ ಮುಕ್ತಾಯಗೊಳ್ಳಲಿದ್ದು ನಂತರ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತೇವೆ ಎಂದರು.
ಇನ್ನು ಚಿತ್ರತಂಡ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ಶೂಟಿಂಗ್ ಆರಂಭವಾಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಮುಂದಿನ ವರ್ಷ ಜನವರಿ 14ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ.
ಆಗಸ್ಟ್ 26ರಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹಿರಿಯ ನಟ ಪ್ರಕಾಶ್ ರೈ ಮತ್ತು ಮಾಳವಿಕಾ ಅವರು ನಟಿಸಿರುವ ದೃಶ್ಯಗಳನ್ನು ಚಿತ್ರೀಕರಣವನ್ನು ಮಾಡಲಾಗಿದೆ.