ಹೈದರಬ್ಶಾದ್, ಅ. 06 (DaijiworldNews/HR): ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಬೆಂಗಳೂರು ಮೂಲದ ಉದ್ಯಮಿ ಗೌತಮ್ ಕಿಚ್ಲು ಜೊತೆಗೆ ಅಕ್ಟೋಬರ್ 30ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ಈ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಕೆಲವು ದಿನಗಳ ಹಿಂದೆ ಇಬ್ಬರೂ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇತ್ತು. ಇದೀಗ ಎಲ್ಲಾ ಅನುಮಾನಗಳಿಗೆ ನಟಿ ತೆರೆ ಎಳೆದಿದ್ದು, ತಾವು ಇಬ್ಬರೂ ಮದುವೆಯಾಗುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಜಲ್, ಅಕ್ಟೋಬರ್ 30ರಂದು ಮುಂಬೈನಲ್ಲಿ ಎರಡು ಕುಟುಂಬದ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆ. ಕೊರೊನಾ ಕಾರಣದಿಂದಾಗಿ ಅದ್ದೂರಿಯಾಗಿ ಮದುವೆಯಾಗುತ್ತಿಲ್ಲ. ಸಣ್ಣ ಸಮಾರಂಭದಲ್ಲಿ ಹಸೆಮಣೆ ತುಳಿಯಲು ತೀರ್ಮಾನಿಸಿದ್ದೇವೆ.
ನಾನು ಸಿನಿಮಾರಂಗದಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಅಭಿಮಾನಿಗಳೇ ಕಾರಣ, ಇದೇ ಅಭಿಮಾನವನ್ನು ಮುಂದೆಯೂ ನನಗೆ ನೀಡಿ. ನಿಮ್ಮ ಆಶೀರ್ವಾದದಿಂದಲೇ ಹೊಸ ಪಯಣ ಆರಂಭಿಸಲು ನಿರ್ಧರಿಸಿದ್ದೇನೆ. ಮದುವೆ ಬಳಿಕವೂ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ತಿಳಿಸಿದ್ದಾರೆ.