ಬೆಂಗಳೂರು, ಅ.5 (DaijiworldNews/HR): ಬಹುಭಾಷಾ ನಟಿ ಪ್ರಿಯಾಮಣಿ ಸೈನೈಡ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇದಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ರಾಜೇಶ್ ಟಚ್ರಿವರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಈ ಸಿನಿಮಾವು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿದ್ದು, ಪ್ರಿಯಾಮಣಿ ಮೂರು ಭಾಷೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಪ್ರಿಯಾಮಣಿ ಸರಣಿ ಕೊಲೆಗಾರನ ಪ್ರಕರಣವನ್ನು ಭೇದಿಸುವ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಿಯಾಮಣಿ ಕಳೆದ ವರ್ಷದ ‘ನನ್ನ ಪ್ರಕಾರ’ ಸಿನಿಮಾದ ಬಳಿಕ ಕನ್ನಡದಲ್ಲಿ ನಟಿಸಿರಲಿಲ್ಲ. ಇದೀಗ ಮತ್ತೆ ಸೈನೈಡ್ ಮೂಲಕ ಚಂದನವನಕ್ಕೆ ಮರಳಿದ್ದಾರೆ.
ಈ ಹಿಂದೆ 1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಆಧರಿಸಿದ ‘ಸೈನೈಡ್’ ಸಿನಿಮಾ 2006ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಸೈನೈಡ್ ಸಿನಿಮಾ ಸರಣಿ ಹಂತಕ ಮೋಹನ್ ಕುಮಾರ್ ಕತೆ ಆಧಾರಿತವಾಗಿದೆ.
ಸೈನೈಡ್ ಮೋಹನ್ ಕುಮಾರ್ 20 ಮಂದಿ ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆಯೊಂದಿಗೆ ಸೈನೈಡ್ ನೀಡಿ ಕೊಲೆ ಮಾಡಿದ್ದ. 2009ರಲ್ಲಿ ಬಂಧಿಸಲ್ಪಟ್ಟ ಮೋಹನ್ ಕುಮಾರ್ 32 ಮಂದಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಆದರೆ ಮೋಹನ್ ಕುಮಾರ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ನೀಡಿಲ್ಲ.