ಮುಂಬೈ, ಅ. 04 (DaijiworldNews/HR): ತಮಿಳಿನ ವಂಡಿ ಚಕ್ರಂ ಸಿನಿಮಾದಲ್ಲಿ ಬಾರ್ ಗರ್ಲ್ ಪಾತ್ರದ ಮೂಲಕ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದಿದ್ದ ನಟಿ ಸಿಲ್ಕ್ ಸ್ಮಿತಾ ಅವರ ಜೀವನಚರಿತ್ರೆ ಮೇಲೆ ಇನ್ನೊಂದು ಸಿನಿಮಾ ತಯಾರಾಗುತ್ತಿದೆ.
ಸಿಲ್ಕ್ ಸ್ಮಿತಾ ತನ್ನ ಜೀವನದಲ್ಲಿ ಹೇಳಿಕೊಳ್ಳಲಾಗದ ಸಮಸ್ಯೆಗಳು ಹಾಗೂ ನಿಭಾಯಿಸಲಾಗದ ತೊಂದರೆಗಳಿಂದ ಜೀವನಕ್ಕೆ ಅಂತ್ಯ ಹಾಡಿದ ನಟಿಯಾಗಿದ್ದು, ಆಕೆಯ ಸಾವಿನ ಕಾರಣ ಇಲ್ಲಿಯವರೆಗೂ ರಹಸ್ಯವಾಗಿಯೇ ಉಳಿದಿದೆ.
ಸಿಲ್ಕ್ ಸ್ಮಿತಾ ತನ್ನ ಅತಿಥಿ ಪಾತ್ರ ಅಥವಾ ಐಟಂ ಹಾಡಿನಲ್ಲಿ ಖ್ಯಾತಿ ಗಳಿಸಿದ್ದು, ಪ್ರತಿಯೊಬ್ಬ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಆಕೆ ನಟಿಸಬೇಕು ಎಂದು ಬಯಸುತ್ತಿದ್ದರು.
ತಮ್ಮ ಸಿನಿಮಾ ಯಶಸ್ಸು ಕಾಣಬೇಕು ಎಂದರೆ ಸ್ಮಿತಾ ನಟಿಸಬೇಕು ಎಂಬ ಭಾವನೆ ನಿರ್ಮಾಪಕರಲ್ಲಿತ್ತು.
ಇನ್ನು ಸಿಲ್ಕ್ ಸ್ಮಿತಾಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಾಪಕಿ ಏಕ್ತಾ ಕಪೂರ್ ‘ಡರ್ಟಿ ಪಿಕ್ಚರ್’ ಸಿನಿಮಾ ಮಾಡಿದ್ದು, ಈ ಸಿನಿಮಾವೂ ಬಾಕ್ಸ್ ಆಫೀಸ್ನಲ್ಲಿ ಹಿಟ್ ಕೂಡ ಆಗಿತ್ತು.
ಇದೀಗ ಮತ್ತೊಬ್ಬ ನಿರ್ದೇಶಕ ಕೆ. ಎಸ್. ಮಣಿಕಂದನ್ ಸಿಲ್ಕ್ ಸ್ಮಿತಾ ಜೀವನಚರಿತ್ರೆಯನ್ನು ತೆರೆ ಮೇಲೆ ತರಲು ಮುಂದಾಗಿದ್ದು, ಆ ಸಿನಿಮಾಕ್ಕೆ ತಾತ್ಕಾಲಿಕವಾಗಿ 'ಅವಳ್ ಅಪ್ಪಾಡಿದಾನ್' ಎಂದು ಹೆಸರಿಸಲಾಗಿದ್ದು, ಅವರ ಜೀವನಚರಿತ್ರೆಯಲ್ಲಿ ಅವರ ಪಾತ್ರದಲ್ಲಿ ನಟಿಸಲು ಸೂಕ್ತವಾಗುವ ನಟಿಯ ಹುಡುಕಾಟದಲ್ಲಿದ್ದೇವೆ ಎಂಬುದಾಗಿ ಮಣಿಕಂದನ್ ಹೇಳಿದ್ದಾರೆ.