ಬೆಂಗಳೂರು,02 (DaijiworldNews/HR): ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ಖ್ಯಾತ ನಿರೂಪಕಿ, ನಟಿ ಅನುಶ್ರೀ ಇಂದು ಕಣ್ಣೀರು ಹಾಕಿದ್ದಾರೆ.
ಈ ಸಂಬಂಧ ಇಂದು ವೀಡಿಯೋ ಮಾಡಿರುವ ಅನುಶ್ರೀ, ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಬದಲಾಗಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದು, ಅದು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.
ಇನ್ನು ಈ ವರ್ಷದ ಸೆಪ್ಟೆಂಬರ್ 24 ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ಮತ್ತೆ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡದಿರುವ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಾಗ, ಆ ದಿನ ಭವಿಷ್ಯದಲ್ಲಿ ಮುಳ್ಳಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದರು.
ನನಗೆ ನೋಟಿಸ್ ಬಂದಿರುವುದು ಬೇಜಾರಾಗಿಲ್ಲ. ಆದರೆ ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೇಳದೆ, ಏನೂ ಕೇಳದೆ ನನ್ನ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದಾರೆ.
ಇನ್ನು ಕಷ್ಟದ ದಿನಗಳಲ್ಲಿ ನನಗೆ ನೆರಳಾಗಿ ನಿಂತಿರುವ ನನ್ನ ಕುಟುಂಬ, ನನ್ನ ತಂಡ, ಸ್ನೇಹಿತರು ಎಲ್ಲರಿಗೂ ಧನ್ಯವಾದಗಳು. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನನ್ನು ಬೆಂಬಲಿಸುತ್ತಿರೋ ಮಾಧ್ಯಮಮಿತ್ರರಿಗೂ ಧನ್ಯವಾದ. ಕನ್ನಡಿಗರು ಕೊಟ್ಟ ಈ ಹೆಸರಿಗೆ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನು ಇಲ್ಲಿವರೆಗೆ ನಾನು ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಅನುಶ್ರೀ ಹೇಳಿದ್ದಾರೆ.