ನವದೆಹಲಿ, ಸೆ. 29 (DaijiworldNews/MB) : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ನಟ ಸೋನು ಸೂದ್ ಅವರ ಈ ಕಾರ್ಯವನ್ನು ವಿಶ್ವಸಂಸ್ಥೆಯು ಪ್ರತಿಷ್ಠಿತ ಎಸ್ಡಿಜಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಯಾವುದೇ ಸ್ವಾರ್ಥ ಮನೋಭಾವನೆ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ತೆರಳಲು ಹಾಗೂ ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಭಾರತಕ್ಕೆ ವಾಪಾಸ್ ಬರಲು ನೆರವಾದ ಸೋನು ಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ)ಯ ಪ್ರತಿಷ್ಠಿತ ಎಸ್ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಸೋಮವಾರ ಸಂಜೆ ನಡೆದ ವಾಸ್ತವ ಸಮಾರಂಭದಲ್ಲಿ ಪ್ರದಾನ ಮಾಡಿತು. ಇನ್ನು ಸೋನು ಸೂದ್ ಇಷ್ಟೇ ಅಲ್ಲದೇ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.
ಇನ್ನು ತನಗೆ ದೊರೆತ ಈ ಗೌರವದ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೋನು ಸೂದ್ ಅವರು, ಯುಎನ್ಡಿಪಿಗೆ ನಾನು ಬೆಂಬಲವಾಗಿರುತ್ತೇನೆ. ಇದು ನನಗೆ ದೊರೆತ ಅಪರೂಪದ ಗೌರವ. ಯಾವುದೇ ನಿರೀಕ್ಷೆ ಮಾಡದೇ ನನ್ನ ದೇಶವಾಸಿಗಳಿಗೆ ನಾನು ಮಾಡಿದ ಸಣ್ಣ ಸಹಾಯಕ್ಕೆ ನನಗೆ ದೊಡ್ಡ ಗೌರವ ದೊರೆತಿದೆ ಎಂದು ಹೇಳಿದ್ದಾರೆ.