ಮುಂಬೈ, ಸೆ.26 (DaijiworldNews/HR): ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಪಾರ್ಟಿ ವೇಳೆ ಡ್ರಗ್ಸ್ ಸೇವನೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಹೇಳಿಕೆಯನ್ನು ನೀಡಿದ್ದಾರೆ.
ಕೆಲವು ಸುದ್ದಿವಾಹಿನಿಗಳಲ್ಲಿ 2019 ರ ಜುಲೈ 28ರಂದು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ನಾರ್ಕೊಟಿಕ್ಸ್ ಡ್ರಗ್ಸ್ ಸೇವನೆ ಮಾಡಿದ್ದೆವು ಎಂದು ವರದಿ ಮಾಡುತ್ತಿವೆ. ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಬಂದಿರುವ ಸುದ್ದಿಗಳು ಸುಳ್ಳಾಗಿದ್ದು, ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಡ್ರಗ್ಸ್ ಆರೋಪದಲ್ಲಿ ಮತ್ತೆ ನನ್ನ ಹೆಸರು, ನನ್ನ ಮನೆಯಲ್ಲಿ ಆಯೋಜಿಸಿದ ಪಾರ್ಟಿಯ ಬಗ್ಗೆ ಕೇಳಿ ಬರುತ್ತಿದ್ದು ಇವು ಸಂಪೂರ್ಣವಾಗಿ ಸುಳ್ಳಾಗಿದೆ. ನನ್ನ ಮನೆಯಲ್ಲಿ ಆದ ಪಾರ್ಟಿಯಲ್ಲಿ ನಾರ್ಕೊಟಿಕ್ಸ್ ಬಳಕೆ ಮಾಡಲಿಲ್ಲ, ಅಂತವುಗಳಿಗೆ ನಾನು ಪ್ರೋತ್ಸಾಹ ಕೂಡ ನೀಡುವುದಿಲ್ಲ ಎಂದು ಕರಣ್ ಜೋಹರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡಿಸುವುದರ ಬಗ್ಗೆ ಎಚ್ಚರಿಸಿರುವ ಅವರು, ಸುಳ್ಳು ಆರೋಪಗಳಿಂದ ನನಗೆ, ನನ್ನ ಕುಟುಂಬದವರಿಗೆ, ನನ್ನ ಧರ್ಮ ಪ್ರೊಡಕ್ಷನ್ ಕಂಪೆನಿ, ಸಹೋದ್ಯೋಗಿಗಳಿಗೆ ತೊಂದರೆಯಾಗುತ್ತದೆ. ಕ್ಷಿತಿಜ್ ಪ್ರಸಾದ್ ಮತ್ತು ಅನುಭವ್ ಚೋಪ್ರಾ ಎಂಬುವವರು ನನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರು ನನಗೆ ನಿಕಟವರ್ತಿಗಳು ಎಂದು ಹಲವು ಸುದ್ದಿವಾಹಿನಿಗಳಲ್ಲಿ ಬರುತ್ತಿದ್ದು, ಇವರಿಬ್ಬರೂ ಕೇವಲ ತಿಂಗಳುಗಳ ಕಾಲವಷ್ಟೇ ನನ್ನ ಕಂಪನಿಯಲ್ಲಿದ್ದರು. ಅವರ ಜೊತೆ ನನಗೆ ಆತ್ಮೀಯತೆ ಇಲ್ಲ, ಇನ್ನು ಮುಂದೆಯೂ ನನ್ನ ಬಗ್ಗೆ ನಕಾರಾತ್ಮಕ ಸುದ್ದಿಗಳನ್ನು ನೀಡುತ್ತಿದ್ದರೆ ಸುಮ್ಮನಿರಲು ಸಾಧ್ಯವಿಲ್ಲ, ಕಾನೂನು ಮೊರೆ ಹೋಗಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.