ಚೆನ್ನೈ, ಸೆ. 25(DaijiworldNews/HR): 5 ದಶಕಗಳಲ್ಲಿ ಸುಮಾರು 40 ಸಾವಿರ ಹಾಡುಗಳನ್ನು ಹಾಡಿದ ಭಾರತೀಯರ ನೆಚ್ಚಿನ ಗಾನಗಂಧರ್ವ ಎಸ್ ಪಿಬಿ ಅವರ ಪೂರ್ತಿ ಹೆಸರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಆದರೆ ಅವರನ್ನು ಸಂಗೀತ ದಿಗ್ಗಜರು, ಸಹ ಗಾಯಕರು ಪ್ರೀತಿಯಿಂದ ಬಾಲು ಸರ್, ಬಾಲುಗಾರು ಎಂದು ಕರೆಯುತ್ತಿದ್ದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಕಳೆದ ಆಗಸ್ಟ್ 5ರಂದು ಕೊರೊನಾ ಪಾಸಿಟಿವ್ ಬಂದು ಚೆನ್ನೈಯ ಎಂಜಿಎಂ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ನುರಿತ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದರು. ಆಗಾಗ ಅವರ ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡುಬರುತ್ತಿತ್ತು. ಕೊರೋನಾ ಗೆದ್ದಿದ್ದರು, ಆದರೆ ಸಾವನ್ನು ಗೆಲ್ಲಲು ಸಾಧ್ಯವಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಎಸ್ ಪಿ ಜನಿಸಿದ್ದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1946ರ ಜೂನ್ 4ರಂದು. ಅವರು ಮೊತ್ತಮೊದಲಿಗೆ ಸಿನೆಮಾದಲ್ಲಿ ಹಾಡಿದ್ದು 1966ರಲ್ಲಿ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ.
ಎಸ್ಪಿಬಿ ತಮ್ಮ 55 ವರ್ಷಗಳ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.
ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡು 16 ಭಾಷೆಗಳಲ್ಲಿ ಅವರಿಗೆ ಸಂಗೀತ ಪ್ರೇಮಿಗಳಿದ್ದಾರೆ. ಹಿಂದಿ ಭಾಷೆಗೆ ಅವರು 1980 ಮತ್ತು 1990ರ ದಶಕದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಏಕ್ ತುಜೆ ಕೆ ಲಿಯೆಗೆ ಹಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿದ್ದಾರೆ.
ಎಸ್ಪಿಬಿ ಕೇವಲ ಗಾಯನಕ್ಕೆ, ನಾಯಕ ನಟರಿಗೆ ಹಾಡಿಗೆ ಧ್ವನಿಯಾಗಿದ್ದು ಮಾತ್ರವಲ್ಲದೇ, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 40ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರು 1966ರಲ್ಲಿ ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾಗಿ ಅವರಿಂದ ಮೆಚ್ಚುಗೆ ಪಡೆದ ಬಳಿಕ ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಇಲ್ಲಿಂದ ಸತತ 5 ದಶಕಗಳ ಕಾಲ ಸಪ್ತಸ್ವರಗಳ ರಥದಲ್ಲಿ ವಿರಾಜಿಸಿದರು.