ಬೆಂಗಳೂರು, ಸೆ. 16 (DaijiworldNews/MB) : ಹಿಂದಿ ಭಾಷಾ ಹೇರಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲ್ಲೇ ಇದೆ. ಇದಕ್ಕೆ ಧ್ವನಿಗೂಡಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸುಲಲಿತವಾದ ಭಾಷೆ ನಮ್ಮದಿರುವಾಗ, ಬೇರೆ ಭಾಷೆಯ ಅಗತ್ಯವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಸುಲಿದಿತ್ತ ರಸಬಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ 'ಅಮ್ಮ' ಪದದಿಂದ 'ಅ' ತೆಗೆದು 'ಮಾ' ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ..! ಹಿಂದೆ ಹೇರಿಕೆ ನಿಲ್ಲಲಿ. ಜೈ ಕರ್ನಾಟಕ ಮಾತೆ'' ಎಂದು ಹೇಳಿದ್ದಾರೆ.
ಇನ್ನು ನಟ ದರ್ಶನ್ ಕೂಡಾ ಟ್ವೀಟ್ ಮಾಡಿ, ''ಹಿಂದಿ ಭಾಷೆ ಹೇರಿಕೆಯನ್ನು ವಿರೋಧಿಸಿದ್ದು, ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ'' ಎಂದಿದ್ದಾರೆ.