ಮುಂಬೈ, ಸೆ.13(DaijiworldNews/HR): ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಾನು ಮಾದಕ ವ್ಯಸನಿಯಾಗಿದ್ದೆ ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಹೇಳುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಾಕಷ್ಟು ಹರಿದಾಡುತ್ತಿದೆ.
ಕಂಗನಾ ಈ ವಿಡಿಯೊವನ್ನು ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದರು.
ಕಂಗನಾ ವಿಡಿಯೋದಲ್ಲಿ, ಹಿಮಾಚಲ ಪ್ರದೇಶದ ಮನಾಲಿಯ ನನ್ನ ಮನೆಯಿಂದ ಹೊರಬಂದು ಮುಂಬೈಗೆ ಚಿತ್ರರಂಗದಲ್ಲಿ ಅವಕಾಶ ಅರಸಿ ಬಂದು ಒಂದೆರಡು ವರ್ಷಗಳಲ್ಲಿ ನಾನು ನಟಿಯಾದೆ. ಅದರ ಒಟ್ಟೊಟ್ಟಿಗೆ ಮಾದಕ ವಸ್ತು ಸೇವನೆಯ ಚಟಕ್ಕೂ ಬಿದ್ದೆ. ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದುಹೋದವು. ನನ್ನ ಜೀವನದಲ್ಲಿ ಹಲವು ಅಪಾಯಕಾರಿ ಘಟನೆಗಳು ನಡೆಯುವಂತಹ ಜನರ ಕೈಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೆ ಎಂದು ಹೇಳುತ್ತಾರೆ.
ಇನ್ನು ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಡ್ರಗ್ ಪ್ರಕರಣದಲ್ಲಿ ಬಂಧಿಸಿದ ಬಳಿಕ ಕಂಗನಾ ಬಾಲಿವುಡ್ ನಲ್ಲಿ ಶೇಕಡಾ 99ರಷ್ಟು ಮಂದಿ ಕೊಕೇನ್ ಸೇವಿಸುತ್ತಾರೆ, ರಣವೀರ್ ಸಿಂಗ್, ರಣಬೀರ್ ಕಪೂರ್, ವಿಕಿ ಕೌಶಲ್ , ಆಯನ್ ಮುಖರ್ಜಿ ಮೊದಲಾದವರ ರಕ್ತ ಪರೀಕ್ಷೆ ಮಾಡಿಸಿ ಎಂದಿದ್ದರು. ಇದೀಗ ಅವರ ಮಾತುಗಳನ್ನು ಹೊಂದಿರುವ ವಿಡಿಯೊಗಳನ್ನು ಒಬ್ಬರು ಶೇರ್ ಮಾಡಿ, ಕಂಗನಾ ಅವರೇ ಡ್ರಗ್ ಸೇವಿಸುತ್ತಿದ್ದರು, ಈಗ ಏನನ್ನುತ್ತೀರಿ ಎಂದು ಕೇಳಿದ್ದಾರೆ.
ಇನ್ನು ಕಂಗನಾ ತಮ್ಮ ಮೇಲೆ ಕೇಳಿಬಂದಿದ್ದ ಡ್ರಗ್ ಆರೋಪ ಸಾಬೀತಾದರೆ ಮುಂಬೈ ನಗರವನ್ನು ಶಾಶ್ವತವಾಗಿ ತೊರೆಯುವುದಾಗಿ ಹೇಳಿದ್ದರು.