ಬೆಂಗಳೂರು, ಸೆ.12(DaijiworldNews/HR): ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅಭಿನಯದ 'ಅಮೃತಮತಿ' ಚಿತ್ರವು ಈಗಾಗಲೇ ಆಸ್ಟ್ರಿಯಾ, ನೋಯ್ಡಾ ಮತ್ತು ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಈ ಪೈಕಿ ಅತ್ಯುತ್ತಮ ಅಭಿನಯಕ್ಕಾಗಿ ಹರಿಪ್ರಿಯಾ ಅವರಿಗೆ ನೋಯ್ಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಅಮರಿಕಾದ ಬೋಸ್ಟನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಈ ಚಿತ್ರ ಆಯ್ಕೆಯಾಗಿದೆ. ಪ್ರಪಂಚದ ವಿವಿಧ ದೇಶಗಳ ಚಿತ್ರಗಳ ಜತೆಗೆ ಹೊಸ ಭಾರತೀಯ ಚಿತ್ರಗಳಿಗೆ ಅವಕಾಶ ಕೊಡುವ ಕಾರಣದಿಂದ ಈ ಚಿತ್ರೋತ್ಸವವನ್ನು 'ಇಂಡಿಯಾ ಇಂಟರ್ನ್ಯಾಷನಲ್ ಫೆಸ್ಟಿವಲ್' ಎಂಬ ಹೆಸರಿನಿಂದ ನಡೆಸಲಾಗುತ್ತಿರುವುದು ವಿಶೇಷ.
'ಅಮೃತಮತಿ' ಚಿತ್ರವು ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿ ನಿರ್ಮಾಣವಾದ ಚಿತ್ರ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನ ಮಾಡಿ, ಮರುಸೃಷ್ಟಿ ಮಾಡಿದ್ದಾರೆ ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ.
ಈ ಸಿನಿಮಾದಲ್ಲಿ ಹರಿಪ್ರಿಯಾ ಜತೆಗೆ ಕಿಶೋರ್, ಸುಂದರ್ರಾಜ್, ಪ್ರಮೀಳಾ ಜೋಷಾಯ್, ತಿಲಕ್, ವತ್ಸಲಾ ಮೋಹನ್, ಸುಪ್ರಿಯಾ ರಾವ್, ಅಂಬರೀಶ್ ಸಾರಾಂಗಿ ಸೇರಿ ಹಲವರು ನಟಿಸಿದ್ದಾರೆ.
'ಅಮೃತಮತಿ' ಚಿತ್ರವನ್ನು ಇಂಚರ ಪ್ರೊಡಕ್ಷನ್ಸ್ನಡಿ ಪುಟ್ಟಣ್ಣ ನಿರ್ಮಿಸಿದ್ದು, ಚಿತ್ರಕ್ಕೆ ಜನಪ್ರಿಯ ಗಾಯಕಿ ಡಾ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದರೆ, ನಾಗರಾಜ ಆದವಾನಿ ಛಾಯಾಗ್ರಹಣ ಮಾಡಿದ್ದಾರೆ.