ಬೆಂಗಳೂರು, ಸೆ.9(DaijiworldNews/HR): ನಿಮ್ಮ ದೇಹ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ ಎಂಬುದಾಗಿ ಯಾರ್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೋ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಸಂದೇಶವನ್ನು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ಡ್ರಗ್ಸ್ ಅನ್ನೋದು ಜಗತ್ತಿಗೆ ಮಾರಕವಾಗಿದೆ. ಡ್ರಗ್ಸ್ ಅಂದರೆ ಇಡೀ ಯುವ ಜನತೆಗೆ ಮಾರಕ. ಅದರಲ್ಲಿ ಯಾರೆಲ್ಲಾ ಭಾಗಿ ಆಗಿದ್ದಾರೆ ಎಂಬುದನ್ನು ನೋಡೊದಾದ್ರೆ, ಹತ್ತು ಡಿಪಾರ್ಟ್ ಮೆಂಟ್ ಇರುತ್ತೆ. ಆದರೆ ಹೈಲೈಟ್ ಆಗುವುದು ಕನ್ನಡ ಚಿತ್ರರಂಗ ಮಾತ್ರ. ಆದರೆ ಇದರಲ್ಲಿ ಇಡೀ ಚಿತ್ರರಂಗ ಅಂತ ಕರೆಯಬೇಡಿ, ಯುವಕರು, ಯುವತಿಯರು, ನಮ್ಮ ರಾಜ್ಯದ ಜನರಿಗೆ ಆಗುತ್ತಿದೆ ಎಂದು ಹೇಳಿ. ಆಗ ನಾವೆಲ್ಲರೂ ಒಟ್ಟಾಗಿ ಸಮಾಜದ ಪ್ರಜೆಯಾಗಿ ಚಿಕ್ಕಮಕ್ಕಳಿಗೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇನ್ನು ಡ್ರಗ್ಸ್ ತೆಗೆದುಕೊಳ್ಳುವವರಿಗೆ ಕಿವಿ ಮಾತು ಹೇಳಿದ ಯಶ್ ಡ್ರಗ್ಸ್ ಎಂದು ತೆಗೆದುಕೊಂಡು ಹಾಳಾಗಬೇಡಿ. ನಿಮ್ಮ ದೇಹವನ್ನು ನಿಮ್ಮ ಅಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನಿಮಗೆ ಯಾವುದೇ ಅಧಿಕಾರ ಇಲ್ಲ. ನಿಮ್ಮ ಪೋಷಕರಿಗಾಗಿ ಒಳ್ಳೆಯ ಹೆಸರು, ಗೌರವದಿಂದ ಕೆಲಸ ಮಾಡಿ. ಇಂತಹ ದುಶ್ಚಟಗಳನ್ನು ಬಿಡಿ ಎಂದು ಯಶ್ ಸಂದೇಶ ನೀಡಿದ್ದಾರೆ.
ಇನ್ನು ರಾಜ್ಯದ ಮೂಲೆ ಮೂಲೆಗಳಿಂದ ಅನೇಕರು ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಬಂದವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಹೀಗಾಗಿ ಅಂತಹವರಿಗೆ ಕಲಿಯಲು ತರಬೇತಿ ಕೊಟ್ಟರೆ ಚಿತ್ರರಂಗವೂ ಕೂಡ ಸಮೃದ್ಧವಾಗಿ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಹೀಗಾಗಿ ನಮ್ಮ ಕಡೆಯಿಂದ ಉತ್ತಮ ತಂತ್ರಜ್ಞಾನ ಹಾಗೂ ಫಿಲ್ಮಂ ಸಿಟಿ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆಗೆ ಮಾತನಾಡಿದ್ದೇವೆ ಎಂದು ಯಶ್ ತಿಳಿಸಿದ್ದಾರೆ.