ಬೆಂಗಳೂರು, ಸೆ. 05 (DaijiworldNews/MB) : ಸಿನಿಮಾಗಳಿಗಿಂತ ಅಧಿಕವಾಗಿ ವಿವಾದಗಳಿಂದಲ್ಲೇ ಸುದ್ದಿಯಾಗುತ್ತಿರುವ ಕಿರಿಕ್ ಪಾರ್ಟಿ ಸಿನಿಮಾದ ನಟಿ ಸಂಯುಕ್ತಾ ಹೆಗಡೆ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಪಾರ್ಕ್ವೊಂದರಲ್ಲಿ ಸಂಯುಕ್ತಾ ಅವರು ವರ್ಕೌಟ್ ಮಾಡುತ್ತಿದ್ದ ಸಂಯುಕ್ತಾ ವಿರುದ್ದ ಅಲ್ಲಿದ್ದ ಕೆಲವು ಮಂದಿ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ.
ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ತನ್ನ ಸ್ನೇಹಿತರೊಂದಿಗೆ ಅಗರ ಉದ್ಯಾನವನದಲ್ಲಿ ಹುಲಾ ಹೂಪ್ ಪ್ರ್ಯಾಕ್ಟೀಸ್ ಮಾಡುತ್ತಿದ್ದು ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಬಟ್ಟೆ ಧರಿಸಿದ್ದರು. ಈ ಸಂದರ್ಭದಲ್ಲಿ ಕೆಲ ಮಂದಿ ಸಂಯುಕ್ತಾ ಅಸಭ್ಯವಾಗಿ ಬಟ್ಟೆ ತೊಟ್ಟು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಸಂಯುಕ್ತಾ ವಿರುದ್ದ ಕಿಡಿಕಾರಿದ್ದು ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಹಾಗಾಗಿ ನೀವು ಪಾರ್ಕ್ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಕೂಡಾ ಆರೋಪಿಸಿದ್ದಾರೆ.
ಕೂಡಲೇ ನಟಿ ಸಂಯುಕ್ತಾ ಹೆಗ್ಡೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದು ನಡೆದ ವಿಚಾರಗಳನ್ನು ವಿವರಿಸಿ ಇದು ತಪ್ಪು ಎಂದು ಹೇಳಿದ್ದು ನೆಟ್ಟಿಗರು ಸಂಯುಕ್ತಾ ವಿರುದ್ದ ಆರೋಪಗಳನ್ನು ಮಾಡಿ, ಸಂಯುಕ್ತಾ ಸ್ನೇಹಿತರಿಗೆ ಹಲ್ಲೆಗೆ ಯತ್ನಿಸಿದ ಕವಿತಾ ರೆಡ್ಡಿ ಎಂಬವರ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೇ ಅಲ್ಲಿಯೇ ಇದ್ದ ವೈದ್ಯರೊಬ್ಬರು, ''ನಾನು ಇಲ್ಲೇ ಇದ್ದೆ. ಈ ಹುಡುಗಿಯರು ಅವರಷ್ಟಕ್ಕೆ ವ್ಯಾಯಾಮ ಮಾಡುತ್ತಿದ್ದರು. ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ. ಆದರೆ ಈ ಮಂದಿ ಯಾಕೆ ಹೀಗೆಲ್ಲಾ ಆರೋಪ ಮಾಡುತ್ತಾರೆ'' ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಇನ್ಸ್ಟಾಗ್ರಾಂ ವಿಡಿಯೋ ಅಪ್ಲೋಡ್ ಮಾಡಿರುವ ಸಂಯುಕ್ತಾ, ಎಲ್ಲಾ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಂಡು ನಾವು ವರ್ಕೌಟ್ ಮಾಡುತ್ತಿದ್ದೆವು. ಆದರೆ ಆ ಮಹಿಳೆ ಬಂದು ನಾವು ಕ್ಯಾಬೆರೆ ಡ್ಯಾನ್ಸರ್ಸ್ ಎಂದೆಲ್ಲಾ ಬಯ್ದು ನನ್ನ ಸ್ನೇಹಿತೆಗೆ ಹೊಡೆಯಲು ಬಂದಿದ್ದಾರೆ. ಅಷ್ಟೇ ಅಲ್ಲದೆ ಡ್ರಗ್ ಕೇಸ್ನಲ್ಲಿ ಫಿಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇನ್ನು ಪೊಲೀಸರು ಕೂಡಾ ನಮಗೆ ಬೆಂಬಲ ನೀಡುತ್ತಿಲ್ಲ. ಪಾರ್ಕ್ ಗೇಟ್ ಹಾಕಿ ನಾವು ಹೊರಗೆ ಹೋಗದಂತೆ ಇಲ್ಲೇ ನಿಲ್ಲಿಸಿದ್ದಾರೆ. ನಾವು ಪೊಲೀಸರೊಂದಿಗೆ ಮಾತನಾಡಲು ಸಿದ್ದರಿದ್ದೇವೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲ.
ಹಾಗೆಯೇ ಮಹಿಳೆ ಕವಿತಾ ರೆಡ್ಡಿ ಸಂಯುಕ್ತಾ ಸ್ನೇಹಿತರಿಗೆ ಹೊಡೆಯಲು ಯತ್ನಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಸಂಯುಕ್ತಾ ನಮ್ಮ ದೇಶದ ಭವಿಷ್ಯವು ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ನಿರ್ಧರಿತ. ಅಗರ ಉದ್ಯಾನವನದಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿದರು. ಸಾಕ್ಷಿಗಳು ಮತ್ತು ಹೆಚ್ಚಿನ ವೀಡಿಯೊ ಪುರಾವೆಗಳಿವೆ. ಇದನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.