ಮುಂಬೈ, ಆ. 22 (DaijiworldNews/MB) : ಆರು ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಅಕ್ಷಯ್ ಕುಮಾರ್ ಅಭಿನಯದ `ಸೂರ್ಯವಂಶಿ’ ಮತ್ತು ರಣವೀರ್ ಸಿಂಗ್ ಅಭಿನಯದ `83′ ಚಿತ್ರಗಳು ಓವರ್ ದಿ ಟಾಪ್ನಲ್ಲೇ (ಓಟಿಟಿ) ಬಿಡುಗಡೆಯಾಗಲಿದೆಯಾ? ಎಂಬ ಪ್ರಶ್ನೆ ಕೆಲವರಲ್ಲಿ ಕಾಡತೊಡಗಿದೆ.
ಈಗಾಗಲೇ ಈ ಎರಡು ಸಿನಿಮಾಗಳು ಐದು ತಿಂಗಳಿನಿಂದ ಬಿಡುಗಡೆಗಾಗಿ ಕಾಯುತ್ತಿರುವ ಕಾರಣ ಓಟಿಟಿಯಲ್ಲಿ ಬಿಡುಗಡೆ ಯಾಕೆ ಮಾಡಬಾರದು ಎಂಬ ಚರ್ಚೆ ಎರಡು ಚಿತ್ರ ತಂಡದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈಗಲೂ ಎರಡೂ ಚಿತ್ರಗಳು ದೀಪಾವಳಿ ಮತ್ತು ಕ್ರಿಸ್ಮಸ್ ವೇಳೆಗೆ ಬಿಡುಗಡೆಯಾಗುತ್ತವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಿಇಓ ಶಿಬಾಶಿಶ್ ಸರ್ಕಾರ್ ಅವರು, ದೀಪಾವಳಿ ಮತ್ತು ಕ್ರಿಸ್ಮಸ್ ವೇಳೆಗೂ ಥಿಯೇಟರ್ ಓಪನ್ ಆಗದಿದ್ದರೆ ಏನು ಮಾಡುವುದು? ಆಗ ಓಟಿಟಿಯಲ್ಲಿ ಬಿಡುಗಡೆ ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಇಷ್ಟು ದಿನಗಳ ಕಾಲ ಥಿಯೇಟರ್ನಲ್ಲೇ ಬಿಡುಗಡೆ ಮಾಡಬೇಕು ಎಂದು ಕಾದು ಕೂತಿದ್ದೇವೆ. ಆದರೆ ಎಷ್ಟು ದಿನ ಕಾಯಲು ಸಾಧ್ಯ. ಸ್ವಲ್ಪ ದಿನಗಳ ಕಾದು ಬಳಿಕ ಚಿತ್ರಮಂದಿರ ಪ್ರಾರಂಭವಾಗದಿದ್ದರೆ, ಆಗ ಅನಿವಾರ್ಯವಾಗಿ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.