ಮುಂಬೈ, ಆ 3(DaijiworldNews/HR): ರಕ್ಷಾಬಂಧನದ ವಿಶೇಷ ದಿನವಾದ ಇಂದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾನು ಹೊಸ ಚಿತ್ರ ರಕ್ಷಾ ಬಂಧನ್ ನಲ್ಲಿ ನಟಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಆನಂದ್ ಎಲ್. ರೈ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾ ಇದಾಗಿದ್ದು, ಇದರಲ್ಲಿ ಅಣ್ಣ ಮತ್ತು ತಂಗಿಯರ ಬಾಂಧವ್ಯದ ಸುತ್ತ ಕಥೆ ಹೆಣೆಯಲಾಗಿದೆಯಂತೆ.
ನನ್ನ ವೃತ್ತಿ ಬದುಕಿನಲ್ಲಿಯೇ ವಿಶಿಷ್ಟವಾದ ಸಿನಿಮಾ ಇದಾಗಿದ್ದು.ಈ ಸಿನಿಮಾವನ್ನು ತನ್ನ ತಂಗಿ ಅಲ್ಕಾ ಭಾಟಿಯಾ ಅವರಿಗೆ ಅರ್ಪಿಸುತ್ತಿದ್ದೇನೆ. ಚಿತ್ರದ ಕಥೆಯು ಪ್ರತಿಯೊಬ್ಬರ ಹೃದಯವನ್ನು ತಟ್ಟಲಿದೆ. ಹಾಗಾಗಿಯೇ, ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಜೊತೆಗೆ ನನ್ನ ತಂಗಿ ಕೂಡ ಈ ಚಿತ್ರ ನಿರ್ಮಾಣದ ಭಾಗವಾಗಿದ್ದಾರೆ ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ.
ಇನ್ನು ಅಕ್ಷಯ್ ಕುಮಾರ್ ನಾಲ್ವರು ತಂಗಿಯರನ್ನು ಅಪ್ಪಿಕೊಂಡಿರುವ ಪೋಸ್ಟರ್ ಬಿಡುಗಡೆಯಾಗಿದ್ದು, ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ. ಮುಂದಿನ ವರ್ಷ ಇದರ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. 2021ರ ನವೆಂಬರ್ 5ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.