ಬೆಂಗಳೂರು, ಜು. 25 (DaijiworldNews/MB) : ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇತ್ತೀಚೆಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ಇದೀಗ ಸೆಲ್ಫಿಗಳನ್ನು ಪೋಸ್ಟ್ ಮಾಡುವ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿದ್ದ ರಮ್ಯಾ (ದಿವ್ಯ ಸ್ಪಂಧನ) ಅವರು ಒಂದು ವರ್ಷಗಳ ಬ್ರೇಕ್ ಬಳಿಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಿದ್ದು ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ.
''ಬಹುತೇಕ ಒಂದು ವರ್ಷದ ಬಳಿಕ ಸಾಮಾಜಿಕ ಜಾಲತಾಣಕ್ಕೆ ವಾಪಾಸ್ ಬಂದಿದ್ದೇನೆ. ನನ್ನನ್ನು ನಾನು ಮರಗಳು, ಪಕ್ಷಿಗಳು, ಪುಸ್ತಕಗಳು ಮತ್ತು ನನ್ನ ನಾಯಿಗಳ ಚಿತ್ರಗಳೊಂದಿಗೆ ನಿಧಾನವಾಗಿ ತೊಡಗಿಸಿಕೊಂಡಿದ್ದೆ. ಮೊದಲು ಕ್ಯಾಮೆರಾ ಮುಂದೆ ಪೋಸ್ ನೀಡುವುದು ಏಲಿಯನ್ ಗಳ ಹಾಗೆ ಭಾಸವಾಗುತ್ತಿತ್ತು. ನಾನು ಅದನ್ನು ಕೈಬಿಟ್ಟಿದ್ದೆ. ಬಳಿಕ ನನ್ನ ಸಾಕು ನಾಯಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದೆ. ಇದು ಕೂಡಾ ನನಗೆ ವಿಚಿತ್ರ ಅನಿಸುತ್ತಿತ್ತು. ಹೀಗಾಗಿ ನಾನು ನನ್ನದೇ ಸೆಲ್ಫಿಗಳನ್ನು ಪೋಸ್ಟ್ ಮಾಡಲು ಆರಂಭಿಸಿದೆ'' ಎಂದು ಹೇಳಿದ್ದಾರೆ.
ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಾಸ್ ಬಂದಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು ಕೆಲವರು ರಾಜಕೀಯದಿಂದ ದೂರ ಉಳಿದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಹಾಗೆಯೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.