ನವದೆಹಲಿ, ಮೇ 27 (Daijiworld News/MB) : ಅನುಷ್ಕಾ ಶರ್ಮಾಗೆ ಡಿವೋರ್ಸ್ ನೀಡಿ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.
ಅನುಷ್ಕಾ ಶರ್ಮಾ ಅವರು ನಿರ್ಮಾಣ ಮಾಡಿರುವ ವೆಬ್ ಸೀರಿಸ್ ಪಾತಾಳ್ ಲೋಕ್ನಲ್ಲಿ ನನ್ನ ಅನುಮತಿ ಇಲ್ಲದೇ ನನ್ನ ಫೋಟೋವನ್ನು ಬಳಸಲಾಗಿದೆ ಎಂದು ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಅನುಷ್ಕಾ ಶರ್ಮಾ ಅವರ ವಿರುದ್ಧವಾಗಿ ದೂರು ನೀಡಿದ್ದಾರೆ.
ದೂರಿನಲ್ಲಿ ನನ್ನ ಅನುಮತಿ ಇಲ್ಲದೆಯೇ ನನ್ನ ಫೋಟೋ ಬಳಸಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ, ಅವರು ನನ್ನ ತೇಜೋವಧೆ ಮಾಡಿದ್ದು ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ನಂದಕಿಶೋರ್, ಅನುಷ್ಕಾ ಅವರು ಈ ರೀತಿ ಅನುಮತಿ ಇಲ್ಲದೆ ಫೋಟೋ ಬಳಸಿರುವುದು ಸರಿಯಲ್ಲ. ಅವರಾಗಿಯೇ ಈ ವೆಬ್ ಸಿರೀಸ್ನ್ನು ಬ್ಯಾನ್ ಮಾಡಬೇಕು. ಹಾಗೆಯೇ ಅವರ ಪತಿ ವಿರಾಟ್ ಕೊಹ್ಲಿ ದೇಶಕ್ಕಾಗಿ ಕ್ರಿಕೆಟ್ ಆಡುವ ರಾಷ್ಟ್ರೀಯವಾದಿ, ಅನುಷ್ಕಾ ಶರ್ಮಾಗೆ ಅವರು ಡಿವೋರ್ಸ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಈ ವೆಬ್ಸಿರೀಸ್ನಲ್ಲಿ ಜಾತಿ ನಿಂದನೆ ಮತ್ತು ನೇಪಾಳಿ ಸಮುದಾಯವೊಂದನ್ನು ಅವಮಾನಿಸಲಾಗಿದೆ ಎಂದು ದೂರು ದಾಖಲಾಗಿದ್ದು ಈ ಕುರಿತಾಗಿ ಅನುಷ್ಕಾಗೆ ನೋಟಿಸ್ ಕೂಡ ನೀಡಲಾಗಿದೆ.
ಅನುಷ್ಕಾ ನಿರ್ಮಾಣ ಮಾಡಿರುವ ವೆಬ್ ಸೀರಿಸ್ ಪಾತಾಳ್ ಲೋಕ್ನಲ್ಲಿ ನಂದಕಿಶೋರ್ ಗುರ್ಜರ್ ಅವರು ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯೂಸ್ಪೇಪರ್ ಕಟಿಂಗ್ವೊಂದನ್ನು ತೋರಿಸಲಾಗಿದೆ. ಇದರಿಂದಾಗಿ ಆಕ್ರೋಶಗೊಂಡಿರುವ ಅವರು, ಈ ವೆಬ್ ಸಿರೀಸ್ನ್ನು ಬ್ಯಾನ್ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೂ ಪತ್ರ ಬರೆದಿದ್ದಾರೆ.