ಬೆಂಗಳೂರು, ಮೇ 25 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಸುಮಾರು 2 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಆರಂಭಗೊಂಡಿದ್ದು ಈವರೆಗೆ ಹಳೆಯ ಎಪಿಸೋಡ್ಗಳನ್ನು ನೋಡಿ ಬೇಜಾರಾಗಿದ್ದ ಧಾರಾವಾಹಿ ಪ್ರಿಯರಿಗೆ ಇನ್ನು ಹೊಸ ಎಪಿಸೋಡ್ಗಳು ಪ್ರಸಾರವಾಗಲಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಧಾರಾವಾಹಿಗಳ ಚಿತ್ರೀಕರಣವನ್ನು ಮೇ 25 ರಿಂದ ಆರಂಭ ಮಾಡಲು ಕರ್ನಾಟಕ ಸರ್ಕಾರ ಮೇ 5 ರಂದು ಗ್ರೀನ್ ಸಿಗ್ನಲ್ ನೀಡಿದ್ದು ಇಂದು ಧಾರಾವಾಹಿಗಳ ಚಿತ್ರೀಕರಣ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಆರಂಭವಾಗಿದ್ದು ಮೇ 31 ರವರೆಗೂ ಒಳಾಂಗಣದಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
ಧಾರಾವಾಹಿ ಚಿತ್ರೀಕರಣದಲ್ಲಿ ಕೇವಲ 18 ಮಂದಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ನಡೆಸಬೇಕಾಗಿದೆ. ಹಾಗೆಯೇ ಎಲ್ಲಾ ಕಲಾವಿದರು ಅವರವರ ಮೇಕಪ್ ಸಾಮಾಗ್ರಿಗಳನ್ನು ತರಬೇಕಾಗಿದೆ. ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ನ್ನು ಕಡ್ಡಾಯವಾಗಿ ಬಳಸಬೇಕು. ಪ್ರತಿ 2 ಗಂಟೆಗೊಮ್ಮೆ ಟೆಂಪರೇಚರ್ ತಪಾಸಣೆ ಮಾಡಿ ಆಯಾ ಚಾನಲ್ಗಳಿಗೆ ಕಳುಹಿಸಬೇಕೆಂದು ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇನ್ನು ಚಿತ್ರೀಕರಣದಲ್ಲಿ ಭಾಗಿಯಾದ ಎಲ್ಲಾ ಕಲಾವಿದರಿಗೂ 3 ಲಕ್ಷ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಕಲಾವಿದರು, ಸಿಬ್ಬಂದಿಗಳ ವೇತನದಲ್ಲಿ ಈ ಮೊತ್ತವನ್ನು ಕಡಿತ ಮಾಡಲಾಗುತ್ತದೆ.