ನವದೆಹಲಿ, ಮೇ 21 (Daijiworld News/MB) : ವಿಶ್ವಸುಂದರಿ ಐಶ್ವರ್ಯಾ ರೈ ತಾನು ವಿಶ್ವಸುಂದರಿ ಸ್ಪರ್ಧೆ ಗೆದ್ದ ಬಳಿಕ ನೆಲದಲ್ಲಿ ಕೂತು ಊಟ ಮಾಡುವ ಹಳೇ ಫೋಟೋ ವೈರಲ್ ಆಗಿದು ಅವರ ಸರಳತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
1994ರಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ನಟಿ ಐಶ್ವರ್ಯಾ ರೈ ವಿಜೇತರಾಗಿದ್ದು ಬಳಿಕ ಆ ಕೀರಿಟ ತೊಟ್ಟುಕೊಂಡೇ ತನ್ನ ತಾಯಿ ಬೃಂದಾ ರೈ ಅವರೊಂದಿಗೆ ನೆಲದಲ್ಲೇ ಕುಳಿತು ಊಟ ಮಾಡಿದ್ದರು. ಇದೀಗ ಆ ಫೋಟೋ ವೈರಲ್ ಆಗಿದೆ.
ಜಗತ್ತಿನ ಅತಿ ದೊಡ್ಡ ಸ್ಪರ್ಧೆಯಲ್ಲಿ ಗೆದ್ದರೂ ಅವರಿಗೆ ಯಾವ ಜಂಭವೂ ಇಲ್ಲ. ಅತ್ಯಂತ ವಿನಮ್ರ ಸುಂದರಿ, ರಾಣಿ ಎಂದೆಲ್ಲಾ ನೆಟ್ಟಿಗರು ಹೊಗಳಿದ್ದಾರೆ.
1994ರ ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 87 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದ 44ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ 21 ವರ್ಷ ಪ್ರಾಯದ ಐಶ್ವರ್ಯಾ ರೈ ಅವರು ವಿಜೇತರಾಗಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದು ಇದೀಗ ಹಲವು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.