ಆಂಧ್ರಪ್ರದೇಶ, ಮೇ 17 (Daijiworld News/MB) : ಸೂಪರ್ ಹಿಟ್ ಆದ ಸಿನಿಮಾ ಬಾಹುಬಲಿಯಲ್ಲಿ ಕಾಲಕೇಯ ಪಾತ್ರ ನಿರ್ವಹಿಸಿದ್ದ ನಟ ಪ್ರಭಾಕರ್ ಅವರು ತಮ್ಮ ಪುತ್ರನಿಗೆ ಈ ಸಿನಿಮಾದ ನಿರ್ದೇಶಕ ರಾಜಮೌಳಿ ಹೆಸರನ್ನೇ ಇಟ್ಟಿದ್ದು ಇದರ ಹಿಂದಿರುವ ಕಾರಣವನ್ನು ಬಹಿರಂಗ ಮಾಡಿದ್ದಾರೆ.
ಈ ಕುರಿತಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ನಟನಾಗಬೇಕೆಂದು ಯೋಚಿಸಿದವನೇ ಅಲ್ಲ. ನನಗೆ ಕ್ರಿಕೆಟ್ ಎಂದರೆ ಇಷ್ಟ. ಮಗಧೀರ ಸಿನಿಮಾಕ್ಕೆ ಎಸ್ ಎಸ್ ರಾಜಮೌಳಿ ನಟರನ್ನುಹುಡುಕುತ್ತಿದ್ದ ಸಂದರ್ಭದಲ್ಲಿ ಗೆಳೆಯನೊನ್ನ ಆಡಿಷನ್ ಸ್ಥಳಕ್ಕೆ ಕರೆದೊಯ್ದಿದ್ದ. ಅಲ್ಲಿ ರಾಜಮೌಳಿ ನನ್ನನ್ನು ನೋಡಿ ಏನು ಹೇಳಿಲ್ಲ. ಆದರೆ ಇದಾದ ಒಂದು ದಿನದ ಬಳಿಕ ರಾಜಮೌಳಿ ಸಹಾಯಕರೊಬ್ಬರು ಕರೆ ಮಾಡಿ ತನ್ನನ್ನು ರಾಜಮೌಳಿ ಮನೆಗೆಯೇ ಕರೆದೊಯ್ದಿದ್ದು ಮರ್ಯಾದ ರಾಮಣ್ಣ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು ಎನ್ನುತ್ತಾರೆ ಪ್ರಭಾಕರ್.
ನಟನೆಯ ಬಗ್ಗೆ ನನಗೆ ಏನು ತಿಳಿದಿಲ್ಲ ಎಂದು ಹೇಳಿದಾಗ ರಾಜಮೌಳಿಯವರು ದೇವ್ ದಾಸ್ ಕನಕಾಲಾಕ್ಕೆ ಅಭಿನಯ ಕಲಿಯಲು ಕಳುಹಿಸಿಕೊಟ್ಟರು. ಈ ಮೂಲಕವಾಗಿ ನನ್ನ ಜೀವನವನ್ನು ನಡೆಸಿಕೊಟ್ಟವರು ಅವರು. ಆ ಬಳಿಕ ಬಾಹುಬಲಿ ಸಿನಿಮಾದಲ್ಲಿಯೂ ನನಗೆ ಕಾಲಕೇಯ ಪಾತ್ರ ನಿರ್ವಹಣೆಗೆ ಅವಕಾಶ ನೀಡಿರುವ ಅವರು ನನ್ನ ಬದುಕಿನಲ್ಲಾದ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದಾರೆ. ಆ ಕಾರಣದಿಂದಾಗಿ ನನ್ನ ಪುತ್ರನಿಗೆ ಶ್ರೀರಾಮ್ ರಾಜಮೌಳಿ ಎಂದು ಹೆಸರಿಟ್ಟಿದ್ದೇನೆ ಎಂದು ಹೇಳಿದ್ದಾರೆ.