ಮುಂಬೈ, ಮೇ 15 (DaijiworldNews/PY) : ಬಾಲಿವುಡ್ನ ಅದ್ಭುತ ನಟ ಇರ್ಫಾನ್ ಖಾನ್ ನಮ್ಮೊಂದಿಗಿಲ್ಲ. ಆದರೆ, ಅವರ ಸಿನಿಮಾಗಳಿಂದ ಅವರು ಗಳಿಸಿರುವ ಪ್ರೀತಿ ಮಾತ್ರ ಎಂದಿಗೂ ಜೀವಂತ. ಇದಕ್ಕೆ ಉದಾರಣೆ ಎಂದರೆ, ಮಹಾರಾಷ್ಟ್ರದ ಗ್ರಾಮವೊಂದಕ್ಕೆ ಹೀರೋ ಚಿ ವಾಡಿ ಎಂದ ಹೆಸರಿಡುವ ಮೂಲಕ ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಗೌರವ ಸಲ್ಲಿಸಿದ್ದಾರೆ. ಸಾಕಷ್ಟು ಜನರಿಗೆ ಇರ್ಫಾನ್ ಖಾನ್ ಅವರು ಬದುಕಿದ್ದ ಸಂದರ್ಭ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಹಳ್ಳಿಗಳಿಗೆ, ಬಡ ಜನರಿಗೆ ನೆರವಾಗಿದ್ದಾರೆ. ಮರಾಠಿಯಲ್ಲಿ ಹೀರೋ ಚಿ ವಾಡಿ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹಾಗಾಗಿ ಇರ್ಫಾನ್ ಖಾನ್ ಮಾಡಿರುವ ಸಹಾಯಕ್ಕೆ ಪ್ರತಿಯಾಗಿ ಪ್ರತಿಯಚಾ ವಾಡಾ ಗ್ರಾಮಕ್ಕೆ ಹೀರೋ ಚಿ ವಾಡಿ ಎಂದು ಹೆಸರಿಡಲಾಗಿದೆ.
ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇದೆ. ಆದರೆ, ಆ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಸಾಕಷ್ಟು ತೊಂದರೆ ಎದುರಿಸುತ್ತಿರುವುದನ್ನು ಗಮನಿಸಿದ ಇರ್ಫಾನ್ ಖಾನ್ ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಆಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೈನ್ ಕೋಟ್ ಹಾಗೂ ಸ್ಟೆಟರ್ ನೀಡಿದ್ದರು. ಇರ್ಫಾನ್ ಅವರು ತಮಗೆ ಮಾಡಿರುವ ಸಹಾಯ ಹಾಗೂ ಅವರ ಮೇಲಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿ ಹೆಸರನ್ನು ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ.
ಇರ್ಫಾನ್ ಖಾನ್ ಅವರು ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಇರ್ಫಾನ್ ಅವರು ಬಾಲಿವುಡ್ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದರು. ಇವರು ಹಾಲಿವುಡ್ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ಇರ್ಫಾನ್ ಅವರು 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದ್ದರು. ನಂತರ ನೂರಾರು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಪ್ರೀತಿ ಪಾತ್ರರಾಗಿದ್ದರು. ಇದರೊಂದಿಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.