ನವದೆಹಲಿ, ಮೇ 14 (Daijiworld News/MB) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಭಾರತೀಯ ಚಿತ್ರರಂಗಕ್ಕೂ ಸಂಕಷ್ಟ ಉಂಟಾಗಿದೆ. ಕಳೆದ ಎರಡು ತಿಂಗಳಿನಿಂದ ಸಿನಿಮಾದ ಚಿತ್ರೀಕರಣವೂ ನಿಂತಿದ್ದು ಯಾವುದೇ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗಿಲ್ಲ. ಏತನ್ಮಧ್ಯೆ ಜೂನ್ 12 ರಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮನ್ ಖುರಾನಾ ಅಭಿನಯದ ಗುಲಾಬೋ ಸಿತಾಬೋ ಚಿತ್ರವನ್ನು ಜೂನ್ 12ಕ್ಕೆ ಜಗತ್ತಿನಾದ್ಯಂತ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಸದ್ಯ ಮೂರನೇ ಹಂತದ ಕೊರೊನಾ ಲಾಕ್ಡೌನ್ ಜಾರಿಯಲ್ಲಿದ್ದು ಮೇ 17 ರಂದು ಕೊನೆಗಾಣಲಿದೆ. ಆ ಬಳಿಕವೂ ಲಾಕ್ಡೌನ್ ಸಂಪೂರ್ಣವಾಗಿ ತೆರವಾಗುವ ಯಾವ ಸಾಧ್ಯತೆಗಳೂ ಇಲ್ಲ. ಆದರೆ ಚಿತ್ರಮಂದಿರದಲ್ಲಿ ಸಿನಿಮಾಗಳ ಬಿಡುಗಡೆಗೆ ಅವಕಾಶ ನೀಡಿದರೂ ಕೂಡಾ ಸಿನಿಮಾ ಮಂದಿರದಲ್ಲಿ ಹೆಚ್ಚಿನ ಜನರು ಬಂದು ಸಿನಿಮಾ ವೀಕ್ಷಿಸುವ ಸಾಧ್ಯತೆಗಳು ಬಹಳ ಕಡಿಮೆ. ಈ ನಿಟ್ಟಿನಲ್ಲಿ ನಿರ್ಮಾಪಕರುಗಳು ತಮ್ಮ ಚಿತ್ರವನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಒಂದೆಡೆ ಚಿತ್ರೀಕರಣ ಸಂಪೂರ್ಣವಾಗದೆ ಚಿತ್ರೀಕರಣದ ಅವಕಾಶಕ್ಕಾಗಿ ಕಾಯುತ್ತಿರುವ ಸಿನಿಮಾಗಳು ಇದ್ದು ಇನ್ನೊಂದೆಡೆ ಬಿಡುಗಡೆಗಾಗಿ ಒಂದರ ನಂತರ ಒಂದರಂತೆ ಹಲವು ಸಿನಿಮಾಗಳು ಸಿದ್ಧವಾಗಿದೆ.
ಜೂನ್ 12 ರಂದು ಬಿಡುಗಡೆಯಾಗಲಿರುವ ಅಮಿತಾಬ್ ಅಭಿನಯದ 'ಗುಲಾಬೋ ಸಿತಾಬೋ' ಸಿನಿಮಾವು ಎ ರೈಸಿಂಗ್ ಸನ್ ಪ್ರೊಡೆಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಸೂಜಿತ್ ಸಿರ್ಕಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.