ಬೆಂಗಳೂರು, ಮೇ 10 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದ್ದು ದಾರಾವಾಹಿ ಒಳಾಂಗಣ ಚಿತ್ರೀಕರಣಕ್ಕೆ ಕೆಲ ದಿನಗಳ ಹಿಂದೆ ಗ್ರೀನ್ ಸಿಗ್ನಲ್ ನೀಡಿತ್ತು. ಇದೀಗ ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ನೀಡದಿದ್ದರೂ ತಾಂತ್ರಿಕ ಕೆಲಸಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ನಗರದಲ್ಲಿ ಭಾನುವಾರ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ನಿರ್ಮಾಪಕರ ಸಂಘದ ಸದಸ್ಯರು ಭೇಟಿ ಮಾಡಿದ್ದು ಈ ಸಂದರ್ಭದಲ್ಲಿ, ಕೊರೊನಾ ಸೋಂಕು ಮತ್ತಷ್ಟು ಹರಡುವ ಭೀತಿ ಇರುವ ಕಾರಣದಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಆದರೆ, ಉಳಿದ ತಾಂತ್ರಿಕ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಚಿತ್ರೀಕರಣಕ್ಕೆ ಅನುಮತಿ ನೀಡಿದರೆ ಕೊರೊನಾ ಸೋಂಕು ನಿಯಂತ್ರಿಸಲು ಸಾಧ್ಯವಾಗದು. ಆದರೆ ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್, ರಿರೆಕಾರ್ಡಿಂಗ್ನಂತಹ ಚಟುವಟಿಕೆಯನ್ನು ನಡೆಸಬಹುದು. ಈ ಸಂದರ್ಭದಲ್ಲೂ ಸರ್ಕಾರದ ಎಲ್ಲಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ಕುಮಾರ್ ಅವರು ತಾಂತ್ರಿಕ ಕೆಲಸಕ್ಕೆ ಅನುಮತಿ ನೀಡಿದ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.