ಮುಂಬೈ, ಮೇ 08 (DaijiworldNews/PY) : ಗೂಗ್ಲಿ ಬೆಡಗಿ ಕೃತಿ ಕರಬಂಧ ತಾವು ಪೋಲ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆ ಕೊರೊನಾ ಲಾಕ್ಡೌನ್ ನಡುವೆ ಹಾಯಾಗಿ ಕಾಲ ಕಳೆಯುತ್ತಿರುವ ನಟಿ ಕೃತಿ ಕರಬಂಧ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಸದ್ಯಕ್ಕೆ ಯಾವುದೇ ಶೂಟಿಂಗ್ ಇಲ್ಲದೇ ಮನೆಯಲ್ಲೇ ಇರುವ ಇವರು ಪೋಲ್ ಹಿಡಿದು ಡ್ಯಾನ್ಸ್ ಮಾಡುವ ವಿಡಿಯೋವನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಪೋಲ್ ಡ್ಯಾನ್ಸ್ನ ವಿಡಿಯೋವನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಕೃತಿ, ಈ ಹಿಂದೆ ಈ ವಿಡಿಯೋವನ್ನು ಶೂಟ್ ಮಾಡಲಾಗಿತ್ತು. ನನಗೆ ಇದನ್ನು ವರ್ಕೌಟ್ ಸಂದರ್ಭ ಮಾಡಲು ಇಷ್ಟ. ಆದರೆ, ನಮ್ಮ ಮನೆಯಲ್ಲಿ ಪೋಲ್ ಇಲ್ಲ ಎಂದು ಬೇಸರವಾಗುತ್ತಿದೆ. ಪೋಲ್ ಇರುತ್ತಿದ್ದರೆ ಲಾಕ್ಡೌನ್ ಸಂದರ್ಭ ನಾನು ಮಾಡುವ ವೇಳಾಪಟ್ಟಿಗೆ ಇದು ಸೇರಿಕೊಳ್ಳುತ್ತಿತ್ತು. ನಿಮ್ಮ ಲಾಕ್ಡೌನ್ ದಿನಚರಿ ಏನು, ಲಾಕ್ಡೌನ್ ಅಲ್ಲಿ ನೀವು ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ಮೊದಲಿನಿಂದಲೂ ಪೋಲ್ ಡ್ಯಾನ್ಸ್ ಎಂದರೆ ಇಷ್ಟ ಇರುವ ಕೃತಿ ಅವರು ಕಳೆದ ವರ್ಷ ತನು ಮತ್ತು ತನ್ನ ಪ್ರಿಯಕರ ಪುಲ್ಕಿತ್ ಸಾಮ್ರಾಟ್
ಪೋಲ್ ಡ್ಯಾನ್ಸ್ ಮಾಡುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಅದರೊಂದಿಗೆ ನಮ್ಮಿಬ್ಬರಲ್ಲಿ ಯಾರು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ ಕಮೆಂಟ್ ಮಾಡಿ ಎಂದೂ ಬರೆದುಕೊಂಡಿದ್ದು, ಆ ಫೋಟೋ ಕೂಡಾ ಸಕತ್ ವೈರಲ್ ಆಗಿತ್ತು.
ಸದ್ಯ ಸಾಮ್ರಾಟ್ ಹಾಗೂ ಕೃತಿ ಒಂದೇ ಮನೆಯಲ್ಲಿ ಇದ್ದಾರೆ. ಇದರೊಂದಿಗೆ ಕೃತಿ ಖಾಸಗಿ ವಾಹಿನಿಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ. ಹೀಗೆ ಸಂದರ್ಶನ ನೀಡುತ್ತಿರುವ ಸಂದರ್ಭ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಅವರು, ನಮಗೆ ಈಗಲೇ ವಿವಾಹವಾಗಲು ಇಷ್ಟವಿಲ್ಲ. ಪುಲ್ಕಿತ್ಗೆ ಕೂಡಾ ಈಗ ವಿವಾಹವಾಗಲು ಇಷ್ಟವಿಲ್ಲ. ಸ್ವಲ್ಪ ಸಮಯದ ನಂತರ ವಿವಾಹವಾಗುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು.
ಕೃತಿ ಕರಬಂಧ ಮೊದಲು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಚಿರಂಜೀವಿ ಸರ್ಜಾ ಜೊತೆ ಚಿರು, ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ, ದುನಿಯಾ ವಿಜಯ್ ಜೊತೆ ಮಾಸ್ತಿಗುಡಿ ಹಾಗೂ ಶಿವಣ್ಣ ಜೊತೆ ಬೆಳ್ಳಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೊನೆಯದಾಗಿ ಕನ್ನಡದಲ್ಲಿ ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಬಾಲಿವುಡ್ಗೆ ಹಾರಿದ ಅವರು ಅಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ.