ಬೆಂಗಳೂರು, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ಸ್ಥಗಿತಗೊಳಿಸಲಾಗಿದ್ದ ಧಾರಾವಾಹಿ ಚಿತ್ರೀಕರಣದ ಪುನರ್ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಅವರು ಧಾರಾವಾಹಿ ಚಿತ್ರೀಕರಣದ ಮೇಲೆ ಆರು ಸಾವಿರಕ್ಕೂ ಅಧಿಕ ಕಾರ್ಮಿಕರು ಅವಲಂಭಿಸಿದ್ದಾರೆ. ಈ ಕಾರಣದಿಂದಾಗಿ ಮನೆಯ ಒಳಗೆ ನಡೆಯುವ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಹೊರಾಂಗಣದಲ್ಲಿ ಚಿತ್ರೀಕರಣ ಮಾಡಲು ಅವಕಾಶವಿಲ್ಲ. ಹಾಗೆಯೇ ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಅನುಮತಿ ಇಲ್ಲ ಎಂದು ಹೇಳಿದ್ದಾರೆ.
ಸೋಮವಾರ ಈ ಕುರಿತು ಸುಳಿವು ನೀಡಿದ್ದ ಸಚಿವ ಆರ್. ಅಶೋಕ್ ಅವರು ಧಾರಾವಾಹಿ, ಸಿನಿಮಾ ಚಿತ್ರೀಕರಣದ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಹಾಗೆಯೇ ಶೂಟಿಂಗ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದ್ದರು.
ಭಾನುವಾರ ಮೇ 11ರಿಂದ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಕೋರಿ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದರು. ಅಂದಾಜು 120 ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದ್ದು, 20 ಸಾವಿರ ಕಲಾವಿದರು, ತಂತ್ರಜ್ಞರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ಅನುಮತಿ ಅವಶ್ಯಕತೆ ಇದೆ ಎಂದು ಹೇಳಿದ್ದರು.
ಇದೀಗ ಸರ್ಕಾರ ಧಾರಾವಾಹಿಯ ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಿದೆ.