ಮುಂಬೈ, ಎ.29 (Daijiworld News/MB) : "ನನಗಿನ್ನೂ ನೆನಪಿದೆ, ಮೈಯಲ್ಲಿನ ಎಲ್ಲಾ ಶಕ್ತಿ ಕಳೆದುಕೊಂಡು ಆಸ್ಪತ್ರೆಗೆ ದಾಖಲಾದ ಆ ದಿನ. ನಾನು ವಾಸವಿರುವ ವಾರ್ಡ್ ಮುಂಭಾಗದಲ್ಲೇ ಲಾರ್ಡ್ಸ್ ಕ್ರೀಡಾಂಗಣವಿದೆ. ಆ ನೋವಿನ ಸಂದರ್ಭದಲ್ಲೂ ಕ್ರೀಡಾಂಗಣದಲ್ಲಿದ್ದ ವಿವಿಯನ್ ರಿಚರ್ಡ್ಸ್ ಮುಗುಳ್ನಗೆಯ ಪೋಸ್ಟರ್ ನೋಡಿದೆ. ಏನು ಅನಿಸಲಿಲ್ಲ. ಯಾಕೆ ಗೊತ್ತಿಲ್ಲ, ಆದರೆ ಒಂದು ಕ್ಷಣ ಈ ಜಗತ್ತೇ ನನಗೆ ಸೇರಿದ್ದಲ್ಲ ಎಂದು ಅನಿಸಿತ್ತು" ಎಂದು ಖ್ಯಾತ ನಟ ಇರ್ಫಾನ್ ಖಾನ್ ತನಗೆ ನ್ಯೂರೊಎಂಡೋಕ್ರೈನ್ ಟ್ಯೂಮರ್ ಇದೆ ಎಂದು ತಿಳಿದ ಬಳಿಕ ಬರೆದ ಮೊದಲ ಸಾಲುಗಳು. 2018 ಡಿಸೆಂಬರ್ 19ರಂದು ಈ ಲೇಖನವು ಪ್ರಕಟವಾಗಿದೆ.
ಬಾಲಿವುಡ್ ನಟರ ಸಾಲಿನಲ್ಲಿ ಭಿನ್ನವಾಗಿ ಕಾಣುವ ಇರ್ಫಾನ್ ಕಳೆದ ವರ್ಷದಾಂತ್ಯವರೆಗೂ ಆರೋಗ್ಯವಾಗಿಯೇ ಇದ್ದರು. ಅಷ್ಟು ಮಾತ್ರವಲ್ಲದೇ ತಮ್ಮ ಅಭಿನಯದ ಬ್ಲ್ಯಾಕ್ಮೇಲ್, ಕ್ಯಾರವಾನ್ ಚಿತ್ರಗಳ ಪ್ರೊಮೋಷನ್ಗೆ ದಿನಾಂಕ ನಿಗದಿ ಪಡಿಸಿಕೊಂಡಿದ್ದರು. ಆದರೆ ಜನವರಿ ತಿಂಗಳಲ್ಲಿ ಇದ್ದಕ್ಕಿದ್ದಂತೆಯೇ ಅನಾರೋಗ್ಯ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾದ ಕೆಲವು ಸಮಯದ ಬಳಿಕ ತಾನು ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದರು. ಬಳಿಕ ತಾನು ನ್ಯೂರೊಎಂಡೋಕ್ರೈನ್ ಟ್ಯೂಮರ್ನಿಂದ ಬಳಲುತ್ತಿರುವುದಾಗಿ ಹೇಳಿದ ಅವರು ತಾನು ಅದರ ವಿರುದ್ಧ ಹೋರಾಡುತ್ತಿದ್ದೇನೆ. ಬದುಕಿ ಬರುವೆ, ದೈರ್ಯ ಆತ್ಮವಿಶ್ವಾಸ ಕಳೆದುಕೊಂಡಿಲ್ಲ ಎಂದು ಹೇಳಿದ್ದರು. ತಾನು ಗುಣಮುಖರಾಗಿ ಬಂದ ಬಳಿಕ "ಹಿಂದಿ ಮೀಡಿಯಂ 2" ಸಿನಿಮಾದ ಕೆಲಸವನ್ನು ಆರಂಭ ಮಾಡಲಿದ್ದ ಇರ್ಫಾನ್ ಖಾನ್ ಇದೀಗ ನ್ಯೂರೊಎಂಡೋಕ್ರೈನ್ ಟ್ಯೂಮರ್ಗೆ ಬಲಿಯಾಗಿದ್ದಾರೆ.
ಶನಿವಾರ ಇರ್ಫಾನ್ ಅವರ ತಾಯಿ ಮೃತಪಟ್ಟಿದ್ದು ತೀವ್ರ ಅನಾರೋಗ್ಯದ ಕಾರಣದಿಂದಾಗಿ ಇರ್ಫಾನ್ ಅವರಿಗೆ ತನ್ನ ತಾಯಿಯ ಅಂತಿಮ ಸಂಸ್ಕಾರದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ. ಬುಧವಾರ ಇರ್ಫಾನ್ ಕೂಡಾ ಕೊನೆಯುಸಿರೆಳೆದಿದ್ದಾರೆ.
ಇರ್ಫಾನ್ ಸಹಜ ನಟನೆಗೆ ಮೆಚ್ಚಿ ಹಾಲಿವುಡ್ನಲ್ಲೂ ಸಿನಿಮಾಕ್ಕೆ ಅವಕಾಶ ಲಭಿಸಿತ್ತು. 2001ರಲ್ಲಿ "ದಿ ವಾರಿಯರ್" ಚಿತ್ರದ ಮೂಲಕ ಹಾಲಿವುಡ್ ಪ್ರವೇಶಿಸಿದ ಇರ್ಫಾನ್ ಜನ ಮನ ಗೆದಿದ್ದಾರೆ. ಆದರೆ ತಾನು ಹಾಲಿವುಡ್ನಲ್ಲಿ ನಟಿಸಿದ್ದೇನೆ ಎಂಬ ಅಹಂ ಎಂದಿಗೂ ಇರ್ಫಾನ್ಗೆ ಇರಲಿಲ್ಲ. ಹಾಗೆಯೇ ಬಾಲಿವುಡ್ನ್ನು ಕೂಡಾ ತೊರೆಯಲಿಲ್ಲ.
2006ರಲ್ಲಿ ನೇಮ್ ಸೇಕ್ ಸಿನಿಮಾದಲ್ಲಿ, 2007 ರಲ್ಲಿ ದಿ ಡಾರ್ಜಲಿಂಗ್ ಲಿಮಿಟೆಡ್ ಸಿನಿಮಾದಲ್ಲಿ 2008 ರಲ್ಲಿ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದ ಮೂಲಕ ಹಾಲಿವುಡ್ನಲ್ಲಿ ಇರ್ಫಾನ್ ಮಿಂಚಿದ್ದಾರೆ. ಅಷ್ಟೇ ಅಲ್ಲದೇ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾ ಆಸ್ಕರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿದೆ. 2011 ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರವು ಲಭಿಸಿದೆ
2012ರಲ್ಲಿ ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, 2015ರ ಜ್ಯುರಾಸಿಕ್ ವರ್ಲ್ಡ್, ಲೈಫ್ ಆಫ್ ಪೈ (2012) , ಐ ಲವ್ ಯು (2009), ಸಿನಿಮಾದಲ್ಲೂ ಅವರು ಪಾತ್ರಕ್ಕೆ ಜೀವ ತುಂಬಿದ್ದು ಲೈಫ್ ಆಫ್ ಪೈ ಸಿನಿಮಾದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಕೊನೆಯದಾಗಿ ಇನ್ಫರ್ನೊ ಎಂಬ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ.
ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರ 'ಸಲಾಂ ಬಾಂಬೆ' ಮೂಲಕ ಚಿತ್ರರಂಗ ಪ್ರವೇಶಿಸಿದ ಇರ್ಫಾನ್ ಖಾನ್ ಕೊನೆಯದಾಗಿ 'ಅಂಗ್ರೇಜಿ ಮೀಡಿಯಂ' ಸಿನಿಮಾದಲ್ಲಿ ನಟಿಸಿದ್ದಾರೆ.
ಮಕ್ಬೂಲ್ (2004), ಪಾನ್ ಸಿಂಗ್ ತೋಮರ್ (2011), ದಿ ಲಂಚ್ ಬಾಕ್ಸ್ (2013), ಹೈದರ್ (2014), ಗುಂಡೇ (2014), ಪಿಕು (2015), ತಲ್ವಾರ್ (2015) ಹಾಗೂ ಹಿಂದಿ ಮೀಡಿಯಮ್ (2017) ಮೊದಲಾದ ಸಿನಿಮಾದಲ್ಲಿ ಇವರು ನಟಿಸಿದ್ದು ಹಾಸಿಲ್ (2003), ಮಕ್ಬೂಲ್ (2004) ಖಳನಟನ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ. ಲೈಫ್ ಇನ್ ಎ... ಮೆಟ್ರೊ (2007)ಗೆ ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಪ್ರಶಸ್ತಿ, ಪಾನ್ ಸಿಂಗ್ ತೋಮರ್ (2011) ಗೆ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.