ಬೆಂಗಳೂರು, ಎ.24 (Daijiworld News/MB) : ತುಳು ಸಿನಿಮಾದಲ್ಲಿ ಮಿಂಚಿರುವ ತುಳು ನಾಡಿನ ಖ್ಯಾತ ನಟ ಪೃಥ್ವಿ ಅಂಬರ್ ದಿಯಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲೂ ಖ್ಯಾತಿ ಗಳಿಸಿದ್ದು ಇದೀಗ ಚಿತ್ರವೊಂದಕ್ಕೆ ಕಥೆ ಬರೆಯಲಿದ್ದು ಲವ್ ಡ್ರಾಮಾದ ಈ ಸಿನಿಮಾಕ್ಕೆ ದರ್ಶನ್ ಅಪೂರ್ವ ಸ್ವತಂತ್ರವಾಗಿ ನಿರ್ದೇಶನ ಮಾಡಲಿದ್ದಾರೆ.
ಲಾಕ್ಡೌನ್ ಬಳಿಕ ತಮ್ಮ ಊರಾದ ಕಾಸರಗೋಡಿಲ್ಲಿರುವ ಅವರು ನವೀನ್ ದ್ವಾರಕನಾಥ್ ನಿರ್ದೇಶಿಸಲಿರುವ ಫಾರ್ ರಿಜಿಸ್ಟ್ರೇಷನ್ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಇದಾದ ಬಳಿಕ ಅವರು ಬರೆದ ಕಥೆ ಸಿನಿಮಾವಾಗಿ ಮೂಡಿಬರಲಿದ್ದು ಅವರೇ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ.
ಈವರೆಗೆ ಸಿನಿಮಾದಲ್ಲಿ ನಟಿಸಿದ್ದ ನಾನು ಈ ಬರವಣಿಗೆ ಮಾಡುತ್ತಿದ್ದೇನೆ. ನನ್ನ ಕಥೆ ಚಿತ್ರವಾಗಿ ಮೂಡಿ ಬರಲಿದ್ದು, ನಾನು ದರ್ಶನ್ ಅಪೂರ್ವ ಸೇರಿ ಚಿತ್ರಕಥೆ ಬರೆಯುತ್ತೇವೆ. ಇದಕ್ಕೆ ಸ್ನೇಹಿತರ ಗುಂಪಿಗೆ ನಿರ್ಮಾಣದ ಹೊಣೆ ಹೊರುವಂತೆ ಕೇಳಿಕೊಳ್ಳಲಾಗುವುದು. ದಿಯಾ ಸಿನಿಮಾದಲ್ಲಿ ಖುಷಿ ಹಾಗೂ ನನ್ನ ಜೋಡಿ ನೋಡಿದ ವೀಕ್ಷಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೊಸ ಸಿನಿಮಾದಲ್ಲಿ ನಾವು ಮಗದೊಮ್ಮೆ ಜೋಡಿಯಾಗಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದಾರೆ. ನಾವಿಬ್ಬರೂ ಕೂಡಾ ಹೊಸ ಸಿನಿಮಾದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದೇವೆ. ಈ ಕುರಿತಾಗಿ ಲಾಕ್ಡೌನ್ ಮುಗಿದ ಬಳಿಕ ತೀರ್ಮಾನಿಸಲಾಗುವುದು ಎಂದು ಹೇಳುತ್ತಾರೆ ಆದಿ ಹೆಸರಲ್ಲೇ ಖ್ಯಾತಿ ಪಡೆದಿರುವ ಪೃಥ್ವಿ ಅಂಬರ್.
ಈ ಸಿನಿಮಾದ ಬಗ್ಗೆ ಇನ್ನು ಕೆಲವು ಮಾಹಿತಿಗಳನ್ನು ನೀಡಿರುವ ಪೃಥ್ವಿ, ಥ್ರಿಲ್ಲರ್ ಆಗಿರುವ ವಿಶಿಷ್ಟ ಪ್ರೇಮಕಥೆಯೇ ನನ್ನ ಮುಂದಿನ ಸಿನಿಮಾ. ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣವಾಗಿ ಕಾಪುವಿನಲ್ಲೇ ಮಾಡಲಾಗುತ್ತದೆ. ಎರಡು ಹಾಡುಗಳು ಈ ಸಿನಿಮಾದಲ್ಲಿ ಇರಲಿದೆ. ಉಡುಪಿಯ ಆಸುಪಾಸಿನ ಭಾಷೆಗಳು ಈ ಸಿನಿಮಾದಲ್ಲಿರಲಿದೆ. ಎಲ್ಲವೂ ಸರಿಯಾಗಿ ನಡೆದ್ದಲ್ಲಿ ಆಗಸ್ಟ್ನಲ್ಲೇ ಚಿತ್ರೀಕರಣ ಆರಂಭ ಮಾಡಲು ಯೋಚನೆ ಮಾಡಿದ್ಧೇವೆ ಎಂದು ತಿಳಿಸಿದ್ದಾರೆ.
ಡ್ಯಾನ್ಸರ್ ಆಗಿದ್ದ ನಾನು ಕ್ಯಾಮೆರಾ ಎದುರಿಸಬಲ್ಲೆ ಎಂದು ತಿಳಿದ ಬಳಿಕ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದೆ. ಸ್ನಾತಕೋತ್ತರ ಶಿಕ್ಷಣವನ್ನು ಮಾಡುವಾಗಲೇ ನಾನು ನಿರ್ದೇಶನ ಮಾಡಬೇಕೆಂದು ಯೋಚನೆ ಮಾಡಿದ್ದೆ. ಈಗ ನಟನೆ ಮಾಡುತ್ತಿದ್ದರೂ ನಿರ್ದೇಶನ ಮಾಡುವ ಆಸಕ್ತಿ ನನ್ನಲ್ಲಿದೆ. ಆದರೆ ಪ್ರಸ್ತುತ ನಟನೆಯ ಮೇಲೆ ನನ್ನ ಗಮನವನ್ನು ಕೇಂದ್ರಿಕರಿಸುತ್ತೇನೆ ಎಂದು ಹೇಳಿದ್ದಾರೆ.