ಮುಂಬೈ, ಎ.23 (Daijiworld News/MB) : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಹಲವು ಸಿನಿಮಾ ನಟರು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದ್ದು ಪ್ರಿಯಾಂಕ ಚೋಪ್ರಾ ಕೂಡಾ ಹಲವು ಬಾರಿ ಸಹಾಯ ಮಾಡುತ್ತಲ್ಲೇ ಬಂದಿದ್ದಾರೆ. ಇದೀಗ ಅವರು 10,000 ಜೋಡಿ ಪಾದರಕ್ಷೆಯನ್ನು ಆರೋಗ್ಯ ಕಾರ್ಯಕರ್ತರಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು ಒಟ್ಟು 10,000 ಜೋಡಿ ಪಾದರಕ್ಷೆಯನ್ನು ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಕಾರ್ಯಕರ್ತರಿಗೆ ನೀಡಿರುವುದನ್ನು ತಿಳಿಸಿದ್ದಾರೆ.
ವಿಶ್ವದಾದ್ಯಂತ ಎಂದಿಗಿಂತಲೂ ಅಗತ್ಯವಾಗಿ ಈ ಸಂದರ್ಭದಲ್ಲಿ ನಮ್ಮೆಲ್ಲರ ಬೆಂಬಲ ಬೇಕಿದೆ. ಆರೋಗ್ಯ ಕಾರ್ಯಕರ್ತರು ಪ್ರತಿದಿನ ತಮ್ಮ ಸುರಕ್ಷತೆಗಾಗಿ ಕೆಲಸ ಮಾಡುತ್ತಾ ನಮಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಬದ್ಧತೆ, ಧೈರ್ಯ, ಮತ್ತು ತ್ಯಾಗದಿಂದಾಗಿ ಹಲವಾರು ಜೀವಗಳು ಬದುಕುತ್ತಿದ್ದಾರೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ವೀರರಾದ ಆರೋಗ್ಯ ಕಾರ್ಯಕರ್ತರಿಗೆ ಅವರಿಗೆ ಆರಾಮ ನೀಡುವ ಹಾಗೂ ಸುರಕ್ಷಿತವಾದ 10,000 ಜೋಡಿ ಪಾದರಕ್ಷೆಗಳನ್ನು ಲಾಸ್ ಏಂಜಲಿಸ್ನಲ್ಲಿ ಕ್ರಾಕ್ಸ್ ಶೂಸ್ ಜೊತೆಗೂಡಿ ನೀಡುತ್ತಿದ್ದೇವೆ. ಇದರೊಂದಿಗೆ ಭಾರತದಲ್ಲಿರುವ ಆರೋಗ್ಯ ಕಾರ್ಯಕರ್ತರಿಗೂ ಪಾದರಕ್ಷೆಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಿಯಾಂಕ ಹಾಗೂ ಅವರ ಪತಿ ನಿಕ್ ಜೊತೆಗೂಡಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಪ್ರಧಾನಿ ಪರಿಹಾರ ನಿಧಿಗೂ ದಂಪತಿ ಸಹಾಯ ನೀಡಿದ್ದಾರೆ.