ಹೈದರಾಬಾದ್, ಎ.19 (Daijiworld News/MB) : ಈಗಾಗಲೇ ಹಲವು ನಿರ್ಮಾಪಕರು ದಿಯಾ ಸಿನಿಮಾದ ರಿಮೇಕ್ಗಾಗಿ ನಿರ್ಮಾಪಕ ಕೃಷ್ಣ ಚೈತನ್ಯ ಅವರಲ್ಲಿ ಕೇಳಿಕೊಂಡಿದ್ದಾರೆ. ಹಾಗೆಯೇ ಇದೀಗ ರಿಮೇಕ್ ಸಿನಿಮಾಗಳತ್ತ ಹೆಚ್ಚು ಒಳವು ತೋರುವ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ಕೂಡಾ ಈ ಸಿನಿಮಾಕ್ಕೆ ಕಣ್ಣು ಹಾಕಿದ್ದು ರಿಮೇಕ್ಗಾಗಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ದಿಯಾ ಸಿನಿಮಾ ಆನ್ಲೈನ್ ಪ್ಲಾಟ್ಫಾರಂನಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದ್ದು ಈ ಸಿನಿಮಾ ನಟಿ ಸಮಂತಾಗೂ ಕೂಡಾ ಬಹಳ ಇಷ್ಟವಾಗಿದೆ. ಈ ನಿಟ್ಟಿನಲ್ಲಿ ಈ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ಅವರೇ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ಎನ್ನಲಾಗಿದೆ.
ಈಗಾಗಲೇ ಈ ರಿಮೇಕ್ಗಳ ಬಗ್ಗೆ ಹೇಳಿಕೆ ನೀಡಿರುವ ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ ಹೆಚ್ಚಾಗಿ ತೆಲುಗು ಸಿನಿಮಾ ರಂಗದಿಂದಲ್ಲೇ ರಿಮೇಕ್ ರೈಟ್ಸ್ಗಾಗಿ ಬೇಡಿಕೆಯಿದೆ ಎಂದು ಹೇಳಿದ್ದರು.
ಕನ್ನಡದಲ್ಲಿ ಭಾರೀ ಹಿಟ್ ಆಗಿದ್ದ ಯೂ ಟರ್ನ್ ಸಿನಿಮಾವನ್ನು ನಿರ್ದೇಶಕ ಪವನ್ ಕುಮಾರ್ ತೆಲುಗು ಹಾಗೂ ತಮಿಳಿಗೆ ರಿಮೇಕ್ ಮಾಡಿದ್ದು ಇದರಲ್ಲಿ ನಟಿ ಸಮಂತಾ ನಟಿಸಿದ್ದರು. ಹಾಗೆಯೇ ಇತ್ತೀಚೆಗೆ ತೆರೆಕಂಡ ಸಮಂತಾ ನಟನೆಯ ಜಾನು ಕೂಡಾ ತಮಿಳಿನ 99 ಸಿನಿಮಾದ ರಿಮೇಕ್.
ನಿರ್ದೇಶಕ ಅಶೋಕ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ದಿಯಾದಲ್ಲಿ ತುಳು ಸಿನಿಮಾ ರಂಗದ ಖ್ಯಾತ ನಟ ಪೃಥ್ವಿ ಅಂಬರ್, ದೀಕ್ಷಿತ್ ನಾಯಕರಾಗಿದ್ದು ನಾಯಕಿಯರಾಗಿ ಖುಷಿ ರವಿ, ನಟಿ ಪವಿತ್ರಾ ಲೋಕೇಶ್ ನಟಿಸಿದ್ದಾರೆ.