ಮುಂಬೈ, ಎ.16 (Daijiworld News/MB) : ಲಾಕ್ಡೌನ್ ಉಲ್ಲಂಘನೆ ಮಾಡಿ ಇತರರ ಜೀವಕ್ಕೂ ತೊಂದರೆ ಉಂಟು ಮಾಡುವ ಜನರ ವಿರುದ್ಧ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿಡಿಮಿಡಿಗೊಂಡಿದ್ದು ಈ ಕುರಿತಾಗಿ ತಮ್ಮ ಇನ್ಸ್ಸ್ಟಾ ಗ್ರಾಂ ಪೋಸ್ಟ್ ಮೂಲಕ ವಾರ್ನಿಂಗ್ ನೀಡಿದ್ದಾರೆ.
ಸಲ್ಮಾನ್ ತನ್ನ 9 ನಿಮಿಷ 36 ಸೆಕೆಂಡ್ಗಳ ಈ ವಿಡಿಯೋದಲ್ಲಿ ತನ್ನ ಅಭಿಮಾನಿಗಳಿಗೆ ಹಾಗೂ ಜನತೆಗೆ ಮನೆಯಲ್ಲೇ ಇದ್ದು ಸರ್ಕಾರದ ಆದೇಶ ಪಾಲಿಸಿ. ನೀವು ಪ್ರಾರ್ಥನೆ ಮಾಡಬೇಕು ಎಮದು ಇದ್ದಲ್ಲಿ ಮನೆಯಲ್ಲಿಯೇ ಮಾಡಿ ಅದು ಬಿಟ್ಟು ಹೊರ ಬಂದು ನಿಮ್ಮವರಿಗೂ ಊರಿಗೂ ತೊಂದರೆ ಉಂಟು ಮಾಡಬೇಡಿ ಎಂದು ತಿಳಿಸಿದ್ದಾರೆ
ಬಿಗ್ ಬಾಸ್ ಖ್ಯಾತಿಯ ಸಲ್ಮಾನ್ ಖಾನ್ ಇದು ಬಿಗ್ ಬಾಸ್ ರಿಯಾಲಿಟಿ ಶೋ ಅಲ್ಲ ಆದರೆ ಜೀವನದ ಬಿಗ್ ಬಾಸ್. ಹಾಗೆಯೇ ತಾನು ಎರಡು ದಿನದ ರಜೆಯಲ್ಲಿ ತನ್ನ ಫಾರ್ಮ್ ಹೌಸ್ಗೆ ಬಂದಿದ್ದು ಈಗ ಎಲ್ಲರಿಗೂ ರಜೆ ಸಿಕ್ಕಿದಂತೆ ಆಗಿದೆ. ಎಂದು ಹೇಳಿದ್ದಾರೆ.
ಇನ್ನು ಮುಖವಾಡ ಧರಿಸುವುದಕ್ಕೆ ಆದ್ಯತೆ ನೀಡಿದ ದಬಾಂಗ್ ನಟ ಸಲ್ಮಾನ್ ಪಡಿತರ ತರಲು ನಗರಕ್ಕೆ ಹೋದ ತನ್ನ ಸ್ನೇಹಿತರೊಬ್ಬರಿಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಸ್ನೇಹಿತ ಹೋದ ಸಂದರ್ಭದಲ್ಲಿ ಬೀದಿಯಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದು ಆತ ಪೊಲೀಸರೊಂದಿಗೆ ಮಾತನಾಡಲು ಮಾಸ್ಕ್ ತೆಗೆದಿದ್ದಾನೆ. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕೂಡಲೇ ಮಾಸ್ಕ್ ಹಾಕುವಂತೆ ತಿಳಿಸಿದನು. ಆತ ಹಿಂದಿರುಗಿದ ಸಂದರ್ಭದಲ್ಲಿ ನಾನು ಕೂಡಾ ಮಾಸ್ಕ್ ತೆಗೆಯುವುದು ಸರಿಯಲ್ಲ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಮೊದಲು ಕೊರೊನಾ ಪ್ರಕರಣ ಸಾಬೀತಾದ ಚೀನಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಆದರೆ ನಮ್ಮ ಜನರು ಗುಂಪಾಗಿ ಹೊರ ಬಂದು ಯಾವುದೇ ಸುರಕ್ಷತೆ ಕೈಗೊಳ್ಳದ ಪರಿಣಾಮದಿಂದಾಗಿ ಈ ರೀತಿಯಾಗಿ ಸೋಂಕು ಹರಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬೀದಿಗೆ ಬರುವ ಜನರಿಗೆ ಪೊಲೀಸರು ಹೊಡೆಯುವುದರ ಕುರಿತಾಗಿ ಮಾತನಾಡಿದ ಅವರು, ಜನರು ಮನೆಯಲ್ಲಿಯೇ ಕುಳಿತಿದ್ದರೆ ಹೊಡೆಯಬೇಕಾಗಿರಲಿಲ್ಲ. ಆದರೆ ಅವರು ನಿಮಯ ಉಲ್ಲಂಘಿಸಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಜನರು ತಮ್ಮ ಸ್ವಂತ ಸುಖಕ್ಕಾಗಿ ಇತರರ ಜೀವನವನ್ನು ಹೇಗೆ ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂಬುದರ ಕುರಿತಾಗಿ ತಿಳಿಸಿದ್ದು, ನೀವು ನಿಮ್ಮ ಜೀವವನ್ನು ಉಳಿಸಲು ಬಯಸುವ ದಾದಿಯರು ವೈದ್ಯರ ಮೇಲೆ ಕಲ್ಲು ತೂರಾಟ ಮಾಡುತ್ತೀರಿ. ಕೊರೊನಾ ವೈರಸ್ ಇರುವವರು ಆಸ್ಪತ್ರೆಯಿಂದ ಓಡಿ ಹೋಗುತ್ತೀರಿ. ವಾಹ್ ನೀವು ಎಲ್ಲಿ ಹೋಗುವುದು ಬದುಕಲೋ ಸಾವಿನ ಕಡೆಗೋ ಎಂದು ಪ್ರಶ್ನೆ ಮಾಡಿದ್ದಾರೆ.
ಬುಧವಾರ ಅವರು ಬೇರೆ ಬೇರೆ ಧರ್ಮದ ಇಬ್ಬರು ಪುರುಷರು ಅವರವರ ಬಾಲ್ಕನಿಯಲ್ಲಿ ಕೂತು ಪ್ರಾರ್ಥನೆ ಮಾಡುವ ಫೋಟೋವನ್ನು ಫೋಸ್ಟ್ ಮಾಡಿದ್ದು ಉದಾಹರಣೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಲ್ಮಾನ್ ತನ್ನ ಕುಟುಂಬದೊಂದಿಗೆ ಪಾನ್ವೆಲ್ ತೋಟದ ಮನೆಯಲ್ಲಿ ಉಳಿದಿದ್ದಾರೆ.