ಬೆಂಗಳೂರು, ಎ.15 (Daijiworld News/MB) : ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್ ದಕ್ಕದಿದ್ದರೂ ಕೂಡಾ ದಿಯಾ ಸಿನಿಮಾ ಭಾರೀ ಜನಮನ್ನಣೆಗೆ ಪಾತ್ರವಾಗಿದೆ. ಇದೀಗ ಈ ಜನ ಮೆಚ್ಚಿದ ಸಿನಿಮಾವನ್ನು ರಿಮೇಕ್ ರೈಟ್ಸ್ಗಾಗಿ ಪರಭಾಷೆಯ ನಿರ್ಮಾಪಕರ ದಂಡೇ ಮುಂದೆ ಬಂದಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ನಿರ್ಮಾಪಕ ಕೃಷ್ಣ ಚೈತನ್ಯ, ದಿಯಾ ಸಿನಿಮಾ ರಿಮೇಕ್ ಹಕ್ಕಿಗಾಗಿ ಭಾರೀ ಬೇಡಿಕೆ ಉಂಟಾಗಿದೆ. ಈವರೆಗೆ ರೈಟ್ಸ್ಗೆ ಸಂಬಂಧಿಸಿ 60ಕ್ಕೂ ಹೆಚ್ಚು ಕರೆಗಳು ಬಂದಿದೆ ಎಂದು ಹೇಳಿದ್ದಾರೆ.
ತೆಲುಗು ಸಿನಿಮಾ ರಂಗದಿಂದಲ್ಲೇ ಬೇಡಿಕೆ ಹೆಚ್ಚಾಗಿದ್ದು ಒಬ್ಬರು ಎಲ್ಲಾ ಭಾಷೆಗಳಲ್ಲಿ ರಿಮೇಕ್ ರೈಟ್ಸ್ ನೀಡಿ ಎಂದು ಕೇಳಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ, ಟಾಲಿವುಡ್ನಲ್ಲಿ ರಿಮೇಕ್ ಮಾಡಲು ತೀರ್ಮಾನ ಮಾಡಿದ್ದೇವೆ. ಆ ಕಾರಣದಿಂದಾಗಿ ಡಬ್ಬಿಂಗ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಮಾಡಬೇಕಿದೆ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಚೈತನ್ಯರವರು.
ಹಾಗೆಯೇ ಎಲ್ಲಾ ಭಾಷೆಗಳಲ್ಲಿ ರಿಮೇಕ್ ರೈಟ್ಸ್ ನೀಡುವಂತೆ ಕೇಳಿಕೊಂಡಿರುವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.
ಈ ಸಿನಿಮಾವನ್ನು 6-5=2 ಚಿತ್ರದ ನಿರ್ದೇಶಕ ಅಶೋಕ ಅವರೇ ನಿರ್ದೇಶಿಸಿದ್ದು ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾದ ಇದು ಜನರ ಮನಗೆದಿದ್ದೆ. ತುಳು ಸಿನಿಮಾ ರಂಗದ ಖ್ಯಾತ ನಟ ಪೃಥ್ವಿ ಅಂಬರ್, ದೀಕ್ಷಿತ್ ನಾಯಕರಾಗಿದ್ದು ನಾಯಕಿಯರಾಗಿ ಖುಷಿ ರವಿ, ನಟಿ ಪವಿತ್ರಾ ಲೋಕೇಶ್ ನಟಿಸಿದ್ದಾರೆ.