ಬೆಂಗಳೂರು, ಎ.13 (Daijiworld News/MB) : ಕೊರೊನಾ ಮಹಾಮಾರಿ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದು ಕೊರೊನಾ ತಡೆಗಟ್ಟಲು ಹಾಕಲಾಗಿರುವ ಲಾಕ್ಡೌನ್ ಹಾಕಿದ್ದು ಹೆಚ್ಚು ಜನರು ಸೇರಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಈ ನಿಟ್ಟಿನಲ್ಲಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಸರಳವಾಗಿ ವಧು ರೇವತಿ ಮನೆಯಲ್ಲಿ ನಡೆಯಲಿದೆ.
ಎಪ್ರಿಲ್ 17ರಂದು ನಿಖಿಲ್ ಕುಮಾರ್ ಹಾಗೂ ರೇವತಿ ವಿವಾಹ ಚೆನ್ನಪಟ್ಟಣದ ಜಾನಪದ ಲೋಕದಲ್ಲಿ ಅದ್ದೂರಿಯಾಗಿ ನಡೆಸಲು ಕುಟುಂಬಸ್ಥರು ತೀರ್ಮಾನ ಮಾಡಿದ್ದರು. ಅದಕ್ಕಾಗಿ ಒಂದುವರೆ ತಿಂಗಳ ಮೊದಲೇ ಎಲ್ಲಾ ತಯಾರಿಯನ್ನೂ ಮಾಡಲು ಆರಂಭಿಸಿದ್ದರು.
ಅಷ್ಟು ಮಾತ್ರವಲ್ಲದೇ ಇದಕ್ಕಾಗಿ ಅದ್ದೂರಿ ಸೆಟ್ ಹಾಕಲೆಂದು ರಾಮನಗರದ ಬಳಿ ಇರುವ 90 ಎಕರೆ ಪ್ರದೇಶದಲ್ಲಿ ಗುದ್ದಲಿ ಪೂಜೆ ಕೂಡಾ ಮಾಡಲಾಗಿತ್ತು. ಹಾಗೆಯೇ ಸುಮಾರು 8 ಲಕ್ಷ ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಲಾಗಿತ್ತು.
ಆದರೆ ಕೊರೊನಾ ಮಹಾಮಾರಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್ಡೌನ್ ಮಾಡಲಾಗಿದ್ದು ಮದುವೆ, ಜಾತ್ರೆ, ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಹಾಗಾಗಿ ಇದೀಗ ಈ ಜೋಡಿಗಳ ವಿವಾಹ ರೇವತಿ ಮನೆಯಲ್ಲಿ ನಡೆಯಲಿದೆ.