ಬೆಂಗಳೂರು, ಎ.09 (Daijiworld News/MB) : ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ್ಯಾದಂತ ಲಾಕ್ಡೌನ್ ಮಾಡಲಾಗಿದ್ದು ಇದರಿಂದಾಗಿ ಬಡವರು ಒಂದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಈಗಾಗಲೇ ಹಲವು ನಟ, ನಟಿ, ಸೆಲೆಬ್ರೆಟಿಗಳು ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿದ್ದು ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಈ ಸಂದರ್ಭದಲ್ಲಿ ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗೆಯೇ ದಿನಗೂಲಿ ಕಾರ್ಮಿಕರು ಕೂಡಾ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವಂತಾಗಿದ್ದು ರಾಧಿಕಾ ಕುಮಾರಸ್ವಾಮಿ ಅವರಿಗೆ ನೆರವಾಗಿದ್ದಾರೆ.
ರಾಧಿಕಾ ಮಂಗಳಮುಖಿಯರು ಹಾಗೂ ಬಡವರ ಬಳಿ ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದು ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ಮುಖ್ಯವಾಗಿ ಮಂಗಳ ಮುಖಿಯರಿಗೆ ದಿನಸಿ ವಿತರಿಸಿದ್ದಾರೆ.